ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ 12.4.1997

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 14:59 IST
Last Updated 11 ಏಪ್ರಿಲ್ 2022, 14:59 IST
   

ವಿಶ್ವಾಸ ಮತಕ್ಕೆ ಸೋಲು: ಸಂಯುಕ್ತ ರಂಗ ಸರ್ಕಾರ ಪತನ

ನವದೆಹಲಿ, ಏ. 11– ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸರ್ಕಾರವು ಲೋಕ ಸಭೆಯಲ್ಲಿ ಇಂದು ಮಂಡಿಸಿದ ವಿಶ್ವಾಸಮತ ನಿರ್ಣಯಕ್ಕೆ 158– 292 ಮತಗಳಿಂದ ಸೋಲಾಯಿತು. ತಕ್ಷಣ ರಾಷ್ಟ್ರಪತಿ ಭವನಕ್ಕೆ ತೆರಳಿದ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ದೇವೇಗೌಡರ ರಾಜೀನಾಮೆಯನ್ನು ಅಂಗೀಕರಿಸಿರುವ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರು ಮುಂದಿನ ವ್ಯವಸ್ಥೆ ಮಾಡುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಈ ನಡುವೆ, ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಇಂದು ಬೆಳಿಗ್ಗೆಯೇ ಲೋಕಸಭೆ ಅಧಿ ವೇಶನಕ್ಕೆ ಹೋಗುವ ಮುನ್ನ ಸಂಯುಕ್ತ ರಂಗದ ಕೆಲವು ನಾಯಕರು, ರಾಜೀನಾಮೆ ನೀಡಿ ಸರ್ಕಾರ ಉಳಿಸುವಂತೆ ದೇವೇಗೌಡರಿಗೆ ಅರಿಕೆ ಮಾಡಿಕೊಂಡರು. ಆದರೆ, ಅದನ್ನು ಒಪ್ಪದ ದೇವೇಗೌಡರು ವಿಶ್ವಾಸ ಮತ ಯಾಚಿಸುವುದಾಗಿ ಲೋಕಸಭೆಗೆ ತೆರಳಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರನ್ನು ತೀವ್ರವಾಗಿ ಟೀಕಿಸಿದ ದೇವೇಗೌಡರು ಕೆಲ ಬಾರಿ ರೋಷದಿಂದ ಕೆಲವೊಮ್ಮೆ ಗದ್ಗದ ಕಂಠದಿಂದ ಮತ್ತೊಮ್ಮೆ ವಿಷಾದದಿಂದ ಮಾತನಾಡಿ ವಿಶ್ವಾಸಮತ ಯಾಚಿಸಿದರು.

ಮಧ್ಯರಾತ್ರಿವರೆಗೆ ಲೋಕಸಭೆಯಲ್ಲಿ ನಡೆದ ಸುದೀರ್ಘ ವಾದ– ವಿವಾದಗಳ ಬಳಿಕ ಸ್ಪೀಕರ್ ಪಿ.ಎ. ಸಂಗ್ಮಾ ಅವರು ನಿರ್ಣಯವನ್ನು ಮತಕ್ಕೆ ಹಾಕಿದರು. ಮತದಾನದ ಬಳಿಕ ನಿರ್ಣಯ ತಿರಸ್ಕೃತವಾಗಿದೆ ಎಂದು ಪ್ರಕಟಿಸಿದರು. ಇದರೊಂದಿಗೆ ಕೇಂದ್ರದಲ್ಲಿ 10 ತಿಂಗಳಹಿಂದೆಅಸ್ತಿತ್ವಕ್ಕೆ ಬಂದಿದ್ದ ಸಂಯುಕ್ತ ರಂಗ ಸರ್ಕಾರ ಇಂದು ಮಧ್ಯರಾತ್ರಿ ಪತನವಾಯಿತು.

ಈ ಮಧ್ಯೆ, ಹೊಸ ನಾಯಕನ ನೇತೃತ್ವದಲ್ಲಿ ಮತ್ತೆ ಸಂಯುಕ್ತ ರಂಗ ಹಾಗೂ ಕಾಂಗ್ರೆಸ್‌ನ ಸರ್ಕಾರವೊಂದನ್ನು ರಚಿಸುವ ಗಂಭೀರ ಯತ್ನಗಳೂ ರಾಜಧಾನಿಯಲ್ಲಿ ಆರಂಭವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.