ADVERTISEMENT

25 ವರ್ಷಗಳ ಹಿಂದೆ | ಬುಧವಾರ ಜೂನ್ 28, 1995

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 14:49 IST
Last Updated 27 ಜೂನ್ 2020, 14:49 IST

ಜಿಲ್ಲೆಗಳಿಗೆ ಖುದ್ದು ಭೇಟಿ ಕಾರ್ಯದರ್ಶಿಗಳಿಗೆ ಸೂಚನೆ

ಬೆಂಗಳೂರು, ಜೂನ್ 27–ರಾಜ್ಯದ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ವಿವಿಧ ಇಲಾಖೆಯ ಕಾರ್ಯದರ್ಶಿಗಳು ಪ್ರತೀ ತಿಂಗಳು ಒಂದಾದರೂ ಜಿಲ್ಲೆಗೆ ಭೇಟಿ ನೀಡಿ ಸರ್ಕಾರ ಪ್ರಕಟಿಸಿರುವ ಕಾರ್ಯಕ್ರಮಗಳ ಅನುಷ್ಠಾನ ಯಾವ ರೀತಿಯಲ್ಲಿ ಸಾಗಿದೆ ಎನ್ನುವುದನ್ನು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಇಂದು ಇಲ್ಲಿ ಸೂಚಿಸಿದರು.

ವಿವಿಧ ಇಲಾಖೆಯ ಮುಖ್ಯಸ್ಥರು ವಿಧಾನ ಸೌಧದಿಂದ ಹೊರಕ್ಕೆ ಹೋಗಬಾರದು ಎಂದೇನೂ ಇಲ್ಲ; ಆದರೆ ಆ ಅಭಿಪ್ರಾಯ ಬರುವ ರೀತಿಯಲ್ಲಿ ಇರುವ ಈಗಿನ ಪರಂಪರೆಯನ್ನು ತಾವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಅಭಾವ: ಸರ್ವಪಕ್ಷ ಸಭೆಗೆ ಯಡಿಯೂರಪ್ಪ ಆಗ್ರಹ

ಬೆಂಗಳೂರು, ಜೂನ್ 27–ರಾಜ್ಯದ ನಾನಾ ಭಾಗಗಳಲ್ಲಿ ತಲೆದೋರಿರುವ ಅಭಾವ ಪರಿಸ್ಥಿತಿ ಎದುರಿಸಿ ಪರಿಹಾರ ಕ್ರಮ ಕೈಗೊಳ್ಳಲು ಕೂಡಲೇ ಸರ್ವಪಕ್ಷಗಳ ನಾಯಕರ ಸಭೆ ಕರೆಯುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರನ್ನು ಆಗ್ರಹಪಡಿಸಿದರು.

ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಪರಿಹಾರ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಈಗಾಗಲೇ ವಿರೋಧಪಕ್ಷಗಳ ನಾಯಕರನ್ನು ಕರೆಯಬೇಕಾಗಿತ್ತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ಹೆಗಡೆ–ನಟವರ ಸಿಂಗ್ ಭೇಟಿ

ಬೆಂಗಳೂರು, ಜೂನ್ 27–ಜನತಾ ದಳದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕಾಂಗ್ರೆಸ್ಸಿನ ಹಿರಿಯ ಮುಖಂಡ ನಟವರ ಸಿಂಗ್ ಅವರನ್ನು ನಗರದಲ್ಲಿ ಇಂದು ಭೇಟಿಯಾಗಿ ಪ್ರಾಸಂಗಿಕವಾಗಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಕುರಿತು ಚರ್ಚಿಸಿದರು.

ಅಶಿಸ್ತಿನ ವರ್ತನೆ ಆಪಾದನೆಯ ಮೇಲೆ ಕಾಂಗ್ರೆಸ್ಸಿನಿಂದ ಅಮಾನತುಗೊಂಡು ಇತ್ತೀಚೆಗಷ್ಟೇ ಮತ್ತೆ ಕಾಂಗ್ರೆಸ್‌ ಅಪ್ಪುಗೆಗೆ ಸೇರಿದ ಮಾಜಿ ವಿದೇಶಾಂಗ ಸಚಿವ ನಟವರ ಸಿಂಗ್ ಕಳೆದ ಎರಡು ದಿನಗಳಿಂದ ನಗರದಲ್ಲಿದ್ದು, ಪಕ್ಷದ ಪುನಶ್ಚೇತನದ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.