ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 29–10–1995

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 1:49 IST
Last Updated 29 ಅಕ್ಟೋಬರ್ 2020, 1:49 IST
   

ತೀವ್ರ ವಿವಾದದಲ್ಲಿ ಭೂಮಿತಿ ಕಾಯ್ದೆ ತಿದ್ದುಪಡಿ

ಮದ್ರಾಸ್‌, ಅ. 28 (ಯುಎನ್‌ಐ, ಪಿಟಿಐ)– ರಾಜ್ಯಗಳು ತಮ್ಮಷ್ಟಕ್ಕೆ ತಾವೇ ಏಕಪಕ್ಷೀಯವಾಗಿ ಭೂಮಿತಿ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.

ಈ ಹಿನ್ನೆಲೆಯಲ್ಲಿ ಅದು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಅಂಗೀಕರಿಸಿದ ಭೂಮಿತಿ ತಿದ್ದುಪಡಿ ವಿಧೇಯಕಗಳಿಗೆ ರಾಷ್ಟ್ರಪತಿಯವರ ಅಂಗೀಕಾರ ತಡೆಹಿಡಿದಿದೆ. ಆದರೆ, ಕರ್ನಾಟಕ ಸರ್ಕಾರವು ಭೂಮಿತಿ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರಪತಿಯವರ ಒಪ್ಪಿಗೆಗೆ ಕಳುಹಿಸದೆ ನೇರವಾಗಿ ರಾಜ್ಯಪಾಲರ ಒಪ್ಪಿಗೆ ಪಡೆದು ಜಾರಿಗೆ ತರುತ್ತಿದೆ ಎಂದು ಕೇಂದ್ರ ಗ್ರಾಮೀಣ ಪ್ರದೇಶ ಮತ್ತು ಉದ್ಯೋಗ ಸಚಿವ ಡಾ. ಜಗನ್ನಾಥ ಮಿಶ್ರಾ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಿಸಿದರು.

ADVERTISEMENT

ಕರ್ನಾಟಕದ ತಿದ್ದುಪಡಿಯು 1972ರಲ್ಲಿ ರೂಪಿಸಲಾದ ಸಾಮಾಜಿಕ ವ್ಯವಸ್ಥೆ ಕುರಿತ ಮಾರ್ಗಸೂಚಿಗೆ ಅನುಗುಣವಾಗಿಲ್ಲ. ಈ ತಿದ್ದುಪಡಿಯು ಭೂ ಸುಧಾರಣೆಗೆ ಸಂಬಂಧಿಸಿದ ರಾಷ್ಟ್ರೀಯ ಒಟ್ಟಭಿಪ್ರಾಯಕ್ಕೆ ವಿರೋಧವಾಗಿರುವ ಕಾರಣ ಜಾರಿ ಮಾಡಬಾರದು ಎಂದು ಅವರು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.

ಬಿಎಸ್‌ಪಿ ಇಬ್ಭಾಗ

ಲಖನೌ, ಅ. 28 (ಪಿಟಿಐ)– ಉತ್ತರ ಪ್ರದೇಶದ 425 ಮಂದಿ ಸದಸ್ಯರ ವಿಧಾನಸಭೆ ವಿಸರ್ಜನೆಯ ಹಿನ್ನೆಲೆಯಲ್ಲಿಯೇ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ವಿಭಜನೆಗೊಂಡಿದೆ.

ಪಕ್ಷ ವಿರೋಧಿ ಚಟುವಟಿಕೆ ಹಾಗೂ ಅಶಿಸ್ತಿನ ಹಿನ್ನೆಲೆಯಲ್ಲಿ ಐವರು ಹಿರಿಯ ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಯಾವತಿ ಅವರು ಉಚ್ಚಾಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.