ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 11–12–1995

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 19:31 IST
Last Updated 10 ಡಿಸೆಂಬರ್ 2020, 19:31 IST
   

ಪೋಲಿಯೊ ಪಿಡುಗು: ರಾಜ್ಯದ 3 ಜಿಲ್ಲೆಗಳಲ್ಲಿ ಅತ್ಯಧಿಕ

ಮಂಗಳೂರು, ಡಿ. 10– ಜಗತ್ತಿನಲ್ಲಿ ವರದಿಯಾಗಿರುವ ಒಟ್ಟು ಪೋಲಿಯೊ ಪಿಡುಗಿನ ಪ್ರಕರಣಗಳಲ್ಲಿ ಅರ್ಧದಷ್ಟು ಭಾರತದಿಂದ ವರದಿಯಾಗಿದ್ದು, ಇವುಗಳಲ್ಲಿ ಬಹುತೇಕ ಪ್ರಕರಣಗಳು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ವರದಿಯಾಗಿರುವುದು ಆತಂಕಕಾರಿ ವಿಚಾರವಾಗಿದೆ.

ಜಗತ್ತಿನ ಸುಮಾರು 147 ರಾಷ್ಟ್ರಗಳು ಪೋಲಿಯೊ ರೋಗದಿಂದ ಮುಕ್ತವಾಗಿವೆ. ಆದರೆ, ಭಾರತದಲ್ಲಿ ಈ ಕಾಯಿಲೆ ಇನ್ನೂ ವರದಿಯಾಗುತ್ತಿರುವುದು ಆರೋಗ್ಯ ಇಲಾಖೆಗೆ ಕಳವಳ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ 2000ನೇ ಇಸವಿ ವೇಳೆಗೆ ಭಾರತದಲ್ಲಿ ಪೋಲಿಯೊ ರೋಗವನ್ನು ಸಂಪೂರ್ಣ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ವ್ಯಾಪಕ ಕ್ರಮ ತೆಗೆದುಕೊಳ್ಳುತ್ತಿವೆ.

ADVERTISEMENT

ರಾಜೀವ್‌ ಹತ್ಯೆ ತನಿಖೆಗೆ ಸರ್ಕಾರ ಅಡ್ಡಿ

ಬೆಂಗಳೂರು, ಡಿ. 10– ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಜೈನ್‌ ಆಯೋಗದ ಕಾರ್ಯ ನಿರ್ವಹಣೆಗೆ ಕಾಂಗ್ರೆಸ್‌ (ಐ) ನೇತೃತ್ವದ ಸರ್ಕಾರ ತಡೆಯೊಡ್ಡುತ್ತಿದೆ ಎಂದು ಇಂದಿರಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಅರ್ಜುನ್‌ ಸಿಂಗ್‌ ಅವರು ಇಂದು ಇಲ್ಲಿ ಆರೋಪಿಸಿದರು.

ರಾಜೀವ್‌ ಗಾಂಧಿ ಹತ್ಯೆಗೆ ಸಂಬಂಧಿಸಿದ ವಿಚಾರಣೆ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಕಾರಣವನ್ನು ಪ್ರಧಾನ ಮಂತ್ರಿಗಳು ಸಂಸತ್‌ನಲ್ಲಿ ಬಹಿರಂಗಪಡಿಸಿ, ಜನತೆಯ ಮನದಲ್ಲಿ ಮೂಡಿರುವ ಅನುಮಾನವನ್ನು ತೊಡೆದು ಹಾಕಬೇಕು, ಇಲ್ಲದಿದ್ದರೆ ದೇಶದ ಜನರಿಗೆ ಈ ವ್ಯವಸ್ಥೆಯಲ್ಲಿ ನಂಬಿಕೆಯೇ ಹೋಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.