ADVERTISEMENT

ಮೊಯ್ಲಿಗೆ ಪ್ರತಿಕೂಲಕರ ವರದಿ ಇಂದು, ನಾಳೆ ರಾಜ್ಯಕ್ಕೆ ವೀಕ್ಷಕರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:50 IST
Last Updated 5 ಜನವರಿ 2019, 19:50 IST

ಮೊಯ್ಲಿಗೆ ಪ್ರತಿಕೂಲಕರ ವರದಿ ಇಂದು, ನಾಳೆ ರಾಜ್ಯಕ್ಕೆ ವೀಕ್ಷಕರು

ನವದೆಹಲಿ, ಜ.5–ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡು ಹಿಡಿಯಲು ಮೂವರು ವೀಕ್ಷಕರ ತಂಡವನ್ನು ಇನ್ನು ಒಂದೆರಡು ದಿನಗಳಲ್ಲೇ ಕಳುಹಿಸಲು ಕಾಂಗ್ರೆಸ್‌–ಐ ಹೈಕಮಾಂಡ್ ತೀರ್ಮಾನಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಎಸ್‌.ಬಿ. ಚವಾಣ್‌ ಅವರು ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರಿಗೆ ಸಲ್ಲಿಸಿರುವ ವರದಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರಿಗೆ ಪ್ರತಿಕೂಲಕರವಾಗಿದೆ ಎಂದು ಹೇಳಲಾಗಿದೆ.

ವೀಕ್ಷಕರ ತಂಡದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ, ಕಾಂಗೈನಲ್ಲಿ ಕರ್ನಾಟಕದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ನವಲ್‌ ಕಿಶೋರ್‌ ಶರ್ಮಾ ಮತ್ತು ಇನ್ನೊಬ್ಬರು ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಮುಂದುವರಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ. ವಿಧಾನಮಂಡಲದ ಅಧಿವೇಶನವನ್ನಾಗಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನಾಗಲಿ ನಡೆಸಲು ಅವರೀಗ ಅಸಮರ್ಥರು. ಪರಿಸ್ಥಿತಿ ಹೀಗೇ ಮುಂದುವರಿದರೆ ಅದರ ಲಾಭ ಬಂಗಾರಪ್ಪ ಮತ್ತು ಈಗಲೂ ಅಶಕ್ತವಾಗಿರುವ ವಿರೋಧಪಕ್ಷಗಳಿಗೆ ಆಗುತ್ತದೆ. ನಾಯಕತ್ವದ ಬಿಕ್ಕಟ್ಟಿನ ಬಗ್ಗೆ ಪಕ್ಷದ ವಿವಿಧ ಬಣಗಳಿಂದ ಮಾಹಿತಿ ಸಂಗ್ರಹಿಸಿ ಚವಾಣ್‌ ಅವರು ನೀಡಿರುವ ವರದಿಯ ಮುಖ್ಯಾಂಶಗಳು ಇವು ಎಂದು ತಿಳಿದು ಬಂದಿದೆ.

ಜ್ಞಾನಪೀಠ ಪ್ರಶಸ್ತಿ

ನವದೆಹಲಿ, ಜ.5 (ಪಿಟಿಐ)– ಖ್ಯಾತ ಒರಿಯಾ ಬರಹಗಾರ ಡಾ.ಸೀತಾಕಾಂತ ಮಹಾಪಾತ್ರ ಅವರನ್ನು 1993 ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ. ಮಹಾಪಾತ್ರ ಅವರು ಈ ಪ್ರಶಸ್ತಿ ಪಡೆಯುತ್ತಿರುವ ಮೂರನೇ ಒರಿಯಾ ಬರಹಗಾರ. 1973 ರಿಂದ 1992 ರ ಅವಧಿಯಲ್ಲಿ ರಚಿಸಿದ ಸಾಹಿತ್ಯಕ್ಕಾಗಿ ಅವರು ಈ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.