ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಶುಕ್ರವಾರ 11.4.1997

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 16:01 IST
Last Updated 10 ಏಪ್ರಿಲ್ 2022, 16:01 IST
   

ಗೌಡರ ಬದಲಾವಣೆಗೆ ಕಾಂಗ್ರೆಸ್ ಪಟ್ಟು: ರಂಗದ ನಕಾರ

ನವದೆಹಲಿ, ಏ. 10– ಕಾಂಗ್ರೆಸ್ ಮತ್ತು ಸಂಯುಕ್ತ ರಂಗದ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಇಂದು ನಡೆದ ಎರಡನೇ ಸುತ್ತಿನ ಮಾತುಕತೆಯೂ ವಿಫಲವಾಯಿತು. ಉಭಯ ಬಣಗಳು ತಮ್ಮ ನಿಲುವಿಗೆ ಬದ್ಧವಾಗಿದ್ದರಿಂದ ಬಿಕ್ಕಟ್ಟು ಬಗೆಹರಿಯಲಿಲ್ಲ. ಇದರಿಂದಾಗಿ ನಾಳೆ ಸೇರಲಿರುವ ಸಂಸತ್ ವೇದಿಕೆಯೇ ಸರ್ಕಾರದ ಹಣೆಬರಹವನ್ನು ನಿರ್ಧರಿಸಲಿದೆ.

ಸಂಯುಕ್ತ ರಂಗವು ತನ್ನ ನಾಯಕತ್ವವನ್ನು ಬದಲಾಯಿಸಿಕೊಳ್ಳಬೇಕು ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಬೇಕೆಂದು ಕಾಂಗ್ರೆಸ್ ತನ್ನ ಹಳೆಯ ನಿಲುವಿಗೇ ಬದ್ಧವಾಗಿದ್ದರೆ, ಸಂಯುಕ್ತ ರಂಗವು ಈ ಎರಡು ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ADVERTISEMENT

ತಾನು ಈಗಿನ ಏಕತೆಯನ್ನು ಉಳಿಸಿಕೊಂಡೇ ಸಂಸತ್ ಮತ್ತು ಜನತೆಯನ್ನು ಎದುರಿಸಲು ದೃಢ ನಿಲುವನ್ನು ತೆಗೆದುಕೊಂಡಿದೆ. ಕಾಂಗ್ರೆಸ್‌ನ ಬೆದರಿಕೆಗೆ ಅಥವಾ ಅದರ ಯಾವುದೇ ಒತ್ತಾಯಕ್ಕೂ ಮಣಿಯುವುದಿಲ್ಲ ಎಂದು ಸಂಯುಕ್ತ ರಂಗದ ಚಾಲನಾ ಸಮಿತಿಯ ಸಭೆಯ ನಂತರ ಸುಮಾರು ಐದುನೂರಕ್ಕೂ ಹೆಚ್ಚು ಮಂದಿ ದೇಶೀಯ ಹಾಗೂ ವಿದೇಶಿ ಪತ್ರಕರ್ತರ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸುರ್ಜಿತ್ ಸಿಂಗ್ ಮತ್ತು ರಂಗದ ಇತರ ನಾಯಕರು ತಮ್ಮ ಅಚಲ ನಿಲುವನ್ನು ಪ್ರಕಟಿಸಿದರು.

ಇಂದು ರಾತ್ರಿ 8 ಗಂಟೆಗೆ ಮತದಾನ

ನವದೆಹಲಿ, ಏ. 10 (ಪಿಟಿಐ)– ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ನಾಳೆ ಸಂಸತ್ತಿನಲ್ಲಿ ಮಂಡಿಸಲಿರುವ ವಿಶ್ವಾಸ ನಿರ್ಣಯದ ಮೇಲಿನ ಮತದಾನ ರಾತ್ರಿ 8 ಗಂಟೆಗೆ ನಡೆಯಲಿದೆ.

ಲೋಕಸಭೆಯ ಸ್ಪೀಕರ್ ಪಿ.ಎ. ಸಂಗ್ಮಾ ಅವರು ಇಂದು ಕರೆದ ಸರ್ವಪಕ್ಷ ಮುಖಂಡರ ಸಭೆಯಲ್ಲಿ ಈ ವಿಷಯವನ್ನು ನಿರ್ಧರಿಸಲಾಯಿತು.

ನಿರ್ಣಯದ ಮೇಲಿನ ಚರ್ಚೆಗೆ ಒಟ್ಟು 8 ತಾಸುಗಳನ್ನು ಮೀಸಲಿಡಲಾಗಿದೆ.

ಕಾಂಗ್ರೆಸ್ ಪಕ್ಷ ಸಂಯುಕ್ತ ರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ದೇವೇಗೌಡ ಅವರು ವಿಶ್ವಾಸ ಮತ ಕೋರಲು ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಸೂಚನೆಯಂತೆ ಲೋಕಸಭೆಯ ಒಂದು ದಿನದ ಅಧಿವೇಶನವನ್ನು ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.