ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 30–10–1995

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 18:11 IST
Last Updated 29 ಅಕ್ಟೋಬರ್ 2020, 18:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಗರ ಭೂ ಕಬಳಿಕೆ ಪತ್ತೆಗೆ ಶೀಘ್ರವೇ ಉನ್ನತ ಸಮಿತಿ

ಬೆಂಗಳೂರು, ಅ. 29– ಸರ್ಕಾರಿ ಭೂಮಿ ಕಬಳಿಕೆಯೂ ಸೇರಿದಂತೆ ನಗರದ ಎಲ್ಲ ಭೂ ಅಕ್ರಮಗಳ ಪತ್ತೆಗೆ ಪೊಲೀಸ್‌ ಮತ್ತು ಕಂದಾಯ ಇಲಾಖೆಗಳ ಉನ್ನತ ಅಧಿಕಾರಿಗಳ ಸಂಯುಕ್ತ ತನಿಖಾ ತಂಡ ರಚಿಸಲು ಸರ್ಕಾರ ನಿರ್ಧರಿಸಿದ್ದು ಈ ತಂಡ ಇನ್ನು ಮೂರು ದಿನಗಳೊಳಗಾಗಿ ತನ್ನ ಕಾರ್ಯ ಆರಂಭಿಸಲಿದೆ.

ನಗರ ಸಂಚಾರ ವ್ಯವಸ್ಥೆ ಹಾಗೂ ನಗರ ರಸ್ತೆಗಳ ವೀಕ್ಷಣೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಈ ವಿಷಯವನ್ನು ಪ್ರಕಟಿಸಿದರು.

ADVERTISEMENT

ಕಂದಾಯ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಗಳಿಗೆ ಸೇರಿದ ನೂರಾರು ಎಕರೆ ಭೂಮಿ ಕಬಳಿಕೆಯೂ ಹಲವಾರು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ಹೇಳಿದರು.

‘ಇದನ್ನು ಕೊನೆಗಾಣಿಸುವ ಸಲುವಾಗಿ ಒಬ್ಬ ಡಿಐಜಿ, ಇಬ್ಬರು ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಮತ್ತು ಕೆಲವು ಕಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಇರುವ ತನಿಖಾ ತಂಡ (ಟಾಸ್ಕ್‌ ಫೋರ್ಸ್‌) ರಚಿಸಲು
ತೀರ್ಮಾನಿಸಲಾಗಿದೆ’ ಎಂದು ಅವರು ವಿವರಿಸಿದರು.

ಪ್ರಾದೇಶಿಕ ಪಕ್ಷಗಳ ಜತೆ ಇಂದು ಆಯೋಗದ ಸಭೆ

ಬೆಂಗಳೂರು, ಅ. 29– ಚುನಾವಣಾ ಆಯೋಗವು ದಕ್ಷಿಣ ರಾಜ್ಯಗಳ ಮಾನ್ಯತೆ ಪಡೆದ ಪ್ರಾದೇಶಿಕ ಪಕ್ಷಗಳ ಜತೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಇಲ್ಲಿ ಚುನಾವಣಾಪೂರ್ವ ಮಾತುಕತೆಗಳನ್ನು ನಡೆಸಲಿದೆ.

ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್‌ ಹಾಗೂ ಮತ್ತಿಬ್ಬರು ಆಯುಕ್ತರಾದ ಡಾ. ಎಂ.ಎಸ್‌.ಗಿಲ್‌ ಮತ್ತು ಜಿ.ವಿ.ಜಿ. ಕೃಷ್ಣಮೂರ್ತಿ ಅವರು ವಿವಿಧ ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳ ಜತೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗೆಗೆ ಮಾತುಕತೆ ನಡೆಸುವರು.

ಕರ್ನಾಟಕದಿಂದ ಆಯೋಗದ ಮಾನ್ಯತೆ ಪಡೆದಿರುವ ಕರ್ನಾಟಕ ಕಾಂಗ್ರೆಸ್‌ ಪಕ್ಷ ಈ ಸಭೆಯಲ್ಲಿ ಭಾಗವಹಿಸಲಿದೆ. ರಾಜ್ಯದ ಉಳಿದ ಪ್ರಾದೇಶಿಕ ಪಕ್ಷಗಳು ನೋಂದಾಯಿತ ಪಕ್ಷಗಳಾದರೂ ಅವು ಆಯೋಗದ ಮಾನ್ಯತೆ ಪಡೆದಿಲ್ಲ ಎಂಬುದು ಗಮನಾರ್ಹ.

ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಬೆಳಿಗ್ಗೆ ಈ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.