ADVERTISEMENT

25 ವರ್ಷಗಳ ಹಿಂದೆ | ಕಾಂಗ್ರೆಸ್‌ಗೆ ಬೆಂಬಲ: ದೇವೇಗೌಡರ ಮನವಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
   

ಕಾಂಗ್ರೆಸ್‌ಗೆ ಬೆಂಬಲ: ದೇವೇಗೌಡರ ಮನವಿ

ಬೆಂಗಳೂರು, ಏ. 10– ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ
ಬಿದ್ದುಹೋದರೆ ಎಲ್ಲ ಜಾತ್ಯತೀತ ಪಕ್ಷಗಳು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು
ಮರೆತು ಪರ್ಯಾಯ ಸರ್ಕಾರ ರಚನೆಗೆ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಇಂದು ಇಲ್ಲಿ ಮನವಿ ಮಾಡಿದರು.

‘ವಾಜಪೇಯಿ ನೇತೃತ್ವದ ಸರ್ಕಾರ ಬಿದ್ದುಹೋಗುತ್ತದೆಯೋ ಇಲ್ಲವೋ ಎಂದು ನಾನು ಖಚಿತವಾಗಿ ಹೇಳಲಾರೆ. ಒಂದು ವೇಳೆ ಸರ್ಕಾರ ಬಿದ್ದು ಹೋದಲ್ಲಿ ದೇಶ ತಕ್ಷಣವೇ ಮತ್ತೊಂದು ಚುನಾವಣೆಗೆ ಸಿದ್ಧವಿಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚಿಸಲು ಲೋಕಸಭೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲ ಜಾತ್ಯತೀತ ಪಕ್ಷಗಳೂ ಬೆಂಬಲ ನೀಡುತ್ತವೆ ಎಂಬ ವಿಶ್ವಾಸ ನನಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ವಾಜಪೇಯಿ ನೇತೃತ್ವದ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಮೇಲ್ನೋಟಕ್ಕೆ ಇದು 19 ಪಕ್ಷಗಳಿಂದ ಕೂಡಿದ ಸಮ್ಮಿಶ್ರ ಸರ್ಕಾರದಂತೆ ಕಂಡುಬಂದರೂ, ಸರ್ಕಾರವನ್ನು ನಿಯಂತ್ರಿಸುತ್ತಿರುವುದು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಸಂಘಟನೆಗಳೇ ಹೊರತು ಸರ್ಕಾರದ ಪಾಲುದಾರ ಪಕ್ಷಗಳಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಜಾತ್ಯತೀತ ಪಕ್ಷಗಳೂ ಒಗ್ಗಟ್ಟಿನಿಂದ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.