ಕೇಪ್‌ಟೌನ್, ಏ.12 (ರಾಯಿಟರ್ಸ್)– ಹ್ಯಾನ್ಸಿ ಕ್ರೊನಿಯೆ ಅವರ ವಿರುದ್ಧ ಹೂಡಲಾದ ‘ಮೋಸದಾಟ’ ಹಾಗೂ ಬಾಜಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅವರನ್ನು ಭಾರತದ ವಶಕ್ಕೆ ಒಪ್ಪಿಸುವ ಬಗ್ಗೆ ನಿರ್ಣಯವನ್ನು ದಕ್ಷಿಣ ಆಫ್ರಿಕಾ ದೇಶದ ಅಧ್ಯಕ್ಷ ಥಾಬೊ ಮೆಬಿಕಿ ಅವರಿಗೆ ಬಿಡಲಾಗಿದೆ ಎಂದು ವಿದೇಶಾಂಗ ಖಾತೆಯ ಮೂಲಗಳು ತಿಳಿಸಿವೆ.
ಆದರೆ ತನಿಖೆ ನಡೆಸಲು ಸ್ವತಂತ್ರ ಸಮಿತಿ ರಚಿಸುವ ಮೊದಲು ಅವರನ್ನು ಭಾರತದ ವಶಕ್ಕೆ ಒಪ್ಪಿಸುವುದಿಲ್ಲ ಎಂದು ವಿದೇಶಾಂಗ ಖಾತೆಯ ಸಹಾಯಕ ಸಚಿವ ಅಜೀಜ್ ಪಹಾಡ್ ಅವರು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಕರಣದ ಪೂರ್ಣ ಮಾಹಿತಿ ದೊರೆಯುವವರೆಗೆ ನಾನು ಏನನ್ನೂ ಊಹಿಸಲು ಸಾಧ್ಯವಿಲ್ಲ. ಭಾರತದೊಂದಿಗೆ ದಕ್ಷಿಣ ಆಫ್ರಿಕಾ ಉತ್ತಮ ಸಂಬಂಧ ಹೊಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ಸರ್ಕಾರದ ಉದ್ದೇಶ’ ಎಂದು ಹೇಳಿದರು.
ಈ ಮಧ್ಯೆ ಪ್ರಕರಣದ ತನಿಖೆ ಮಾಡಲು ನ್ಯಾಯಾಂಗ ಆಯೋಗವನ್ನು ಶೀಘ್ರವಾಗಿ ರಚಿಸಲಾಗುವುದು ಎಂದು ಕ್ರೀಡಾ ಸಚಿವಾಲಯದ ವಕ್ತಾರ ಗ್ರಹಾಂ ಅಬ್ರಹಾಂಸ್ ಅವರು ತಿಳಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿದ್ದು ಇದನ್ನು ಒಂದು ರಾಷ್ಟ್ರೀಯ ಸಂಕಟ ಎಂದು ಪರಿಗಣಿಸಿ ಮರುಕ ಪಟ್ಟುಕೊಳ್ಳುತ್ತಾ ಕೂರಬಾರದು ಎಂದು ಸರ್ಕಾರ ಜನರಿಗೆ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.