ADVERTISEMENT

ರಾಜೀನಾಮೆ ಅಂಗೀಕಾರಕ್ಕೆ ನರಸಿಂಹ ರಾವ್ ತಡೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:43 IST
Last Updated 4 ಜನವರಿ 2019, 16:43 IST

ರಾಜೀನಾಮೆ ಅಂಗೀಕಾರಕ್ಕೆ ನರಸಿಂಹ ರಾವ್ ತಡೆ

ಬೆಂಗಳೂರು, ಜ. 4– ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಎಂಟು ಮಂದಿ ಭಿನ್ನ ಸಚಿವರ ರಾಜೀನಾಮೆಗಳನ್ನು ಅಂಗೀಕರಿಸದೆ ತಡೆ ಹಿಡಿಯಬೇಕೆಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ರಾತ್ರಿ ಮನವಿ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಅವರು ಈ ಎಂಟೂ ಮಂದಿಯ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಲು ಇಂದು ಸಂಜೆ ರಾಜ್ಯಪಾಲ
ರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ರಾತ್ರಿಯ ದಿಢೀರ್ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಅವರು ರಾಜೀನಾಮೆಗಳನ್ನು ಅಂಗೀಕರಿಸದೆ ತಡೆ ಹಿಡಿಯಲು ಕೋರಿದ್ದಾರೆ.

ADVERTISEMENT

ಎಐಸಿಸಿ ಅಧ್ಯಕ್ಷರೂ ಆದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಸೂಚನೆಗೆ ಅನುಗುಣವಾಗಿ ಈ ನಿರ್ಧಾರವನ್ನು ತಳೆದುದಾಗಿ ಮೊಯಿಲಿ ಅವರು ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ಸಾಧ್ಯತೆ?

ನವದೆಹಲಿ, ಜ. 4– ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಎಸ್.ಬಿ. ಚವಾಣ್ ಅವರು ನೀಡಲಿರುವ ವರದಿ ಆಧರಿಸಿ ರಾಜ್ಯ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು ಪಕ್ಷದ ವರಿಷ್ಠ ಮಂಡಳಿ ನಿರ್ಧರಿಸಿದೆ. ಬಿಕ್ಕಟ್ಟು ನಿವಾರಣೆ ದಿಶೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಸಾಧ್ಯತೆಯನ್ನೂ ವರಿಷ್ಠ ಮಂಡಳಿ ತಳ್ಳಿ ಹಾಕಿಲ್ಲ.

ಕೆಲವು ತಿಂಗಳಿಂದ ನೆನೆಗುದಿಗೆ ಬಿದ್ದಿರುವ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕತ್ವದ ಬಿಕ್ಕಟ್ಟಿನ ಬಗೆಗೆ ಚವಾಣ್ ಅವರು ನಿನ್ನೆಯಿಂದ ವಿವಿಧ ಬಣಗಳ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು ಇಂದು ಪಕ್ಷದ ಅಧ್ಯಕ್ಷ ಹಾಗೂ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಭೇಟಿ ಮಾಡಿ ಅವರಿಗೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.