ADVERTISEMENT

ಭಾನುವಾರ, 16–3–1969

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:00 IST
Last Updated 15 ಮಾರ್ಚ್ 2019, 20:00 IST

ನಾಲ್ಕನೆ ಯೋಜನೆಯಲ್ಲಿ ಪ್ರಾದೇಶಿಕ ಅಭಿವೃದ್ಧಿ ಬಗ್ಗೆ ತೀವ್ರ ಗಮನ: ಇಂದಿರಾ
ನವದೆಹಲಿ, ಮಾ. 15– ಎಲ್ಲ ಪ್ರದೇಶಗಳಲ್ಲೂ ಸಮತೋಲದ ಅಭಿವೃದ್ಧಿಯಾದಾಗ, ಧನಿಕರು, ದರಿದ್ರರ ನಡುವಣ ಅಂತರ ಕಡಿಮೆಯಾದಾಗ ರಾಷ್ಟ್ರ ಆರ್ಥಿಕ, ಸಾಮಾಜಿಕ, ರಾಜಕೀಯ ಸುಭದ್ರತೆ ಪಡೆಯಲು ಸಾಧ್ಯ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ತಿಳಿಸಿದರು.

ನಾಲ್ಕನೆ ಯೋಜನೆ ಅವಧಿಯಲ್ಲಿ ಪ್ರಾದೇಶಿಕ ಅಭಿವೃದ್ಧಿ ಕುರಿತ ಸಮಸ್ಯೆಗಳತ್ತ ತೀವ್ರ ಗಮನ ಹರಿಸಬೇಕಾಗಿದೆ ಎಂದು ಭಾರತೀಯ ವಾಣಿಜ್ಯ, ಕೈಗಾರಿಕಾ ಸಂಘದ ಫೆಡರೇಷನ್ನಿನ 42ನೇ ವಾರ್ಷಿಕ ಅಧಿವೇಶನವನ್ನುದ್ದೇಶಿಸಿ ಮಾತಾಡುತ್ತ ಶ್ರೀಮತಿ ಗಾಂಧಿ ತಿಳಿಸಿದರು.

ಮೂಲಭೂತ ಅಗತ್ಯಗಳ ಗುರಿ ಸಾಧನೆಗೆ ಕಾಲಮಿತಿ ನಿಗದಿ ಮಾಡಲು ಸಲಹೆ
ನವದೆಹಲಿ, ಮಾ. 15– ಜನತೆಗೆ ಆಹಾರ, ಬಟ್ಟೆ, ವಸತಿ ಮೊದಲಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಗುರಿ ಸಾಧಿಸುವ ಬಗ್ಗೆ ಒಂದು ನಿರ್ದಿಷ್ಟ ಕಾಲಮಿತಿಯನ್ನು ಗೊತ್ತುಪಡಿಸುವಂತೆ ಕೇಂದ್ರ ಸಂಪುಟವು ಯೋಜನಾ ಆಯೋಗಕ್ಕೆ ಸಲಹೆ ಮಾಡಿದೆ.

ADVERTISEMENT

ಪೂ. ಪಾಕ್‌ನಲ್ಲಿ ಭೀಕರ ಹಿಂಸಾಕಾಂಡ: 91 ಸಾವು
ಕರಾಚಿ, ಮಾ. 15– ಪೂರ್ವ ಪಾಕಿಸ್ತಾನದಲ್ಲಿ ಸಾಮೂಹಿಕ ಹಿಂಸಾಚಾರ ಸಿಡಿದೆದ್ದು ಈಚಿನ ಕೆಲವು ದಿನಗಳಲ್ಲಿ 91 ಜನ ಕೊಲ್ಲಲ್ಪಟ್ಟಿದ್ದಾರೆಂದೂ, 546 ಮನೆಗಳು ಸುಡಲ್ಪಟ್ಟಿವೆಯೆಂದೂ ಇಂದು ಇಲ್ಲಿಗೆ ವರದಿಗಳು ಬರುತ್ತಿವೆ.

ಉದ್ರಿಕ್ತ ಜನರು ಗ್ರಾಮಗಳ ಅಧ್ಯಕ್ಷರು ಹಾಗೂ ಮೇಯರ್ ಮನೆಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.

ಈ ವ್ಯಾಪಕ ಹಿಂಸಾಚಾರ ರಾಜಕೀಯ ಚಳವಳಿಗಿಂತ ಹೆಚ್ಚಾಗಿ ಪುಂಡಾಟಿಕೆ ಎಂದು ಸರಕಾರಿ ವಲಯಗಳು ನಿಕೃಷ್ಟವಾಗಿ ವರ್ಣಿಸಿದ್ದರೂ 62 ಜನ ಸತ್ತಿದ್ದಾರೆಂದು ಅವು ದೃಢಪಡಿಸಿವೆ.

ಜನರಿಂದಲೇ ಗಲ್ಲು: ಮದಾರಿಪುರದಲ್ಲಿ ಎಂಟು ಜನರನ್ನು ‘ಉನ್ಮತ್ತರ’ ಗುಂಪೊಂದು ಸ್ವತಃ ಅವರ ವಿರುದ್ಧ ತೀರ್ಪಿತ್ತು ಗಲ್ಲಿಗೇರಿಸಿತ್ತು. ನಂತರ ಅವರ ಶವಗಳನ್ನು ಉರಿಯುತ್ತಿದ್ದ ಮನೆಗಳಿಗೆ ಎಸೆಯಲಾಯಿತು. ಇಬ್ಬರ ಕತ್ತು ಕುಯ್ಯಲಾಯಿತು. ಇತರರ ಕಣ್ಣು ಕೀಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.