ADVERTISEMENT

ಸೋಮವಾರ, 11–8–1969

ಸೋಮವಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 17:19 IST
Last Updated 10 ಆಗಸ್ಟ್ 2019, 17:19 IST

ಗೂಡ್ಸ್‌ಟ್ರೈನ್ ಹರಿದು 12 ಜನ ಗ್ಯಾಂಗ್‌ಮನ್ನರ ಸಾವು

ಹೈದರಾಬಾದ್, ಆ. 10– ಹೈದರಾಬಾದ್ ನಗರದ ಮಧ್ಯಭಾಗದಲ್ಲಿ ಹುಸೇನ್‌ಸಾಗರ ಸೇತುವೆ ಮೇಲೆ ಇಂದು ಬೆಳಿಗ್ಗೆ ಹನ್ನೆರಡು ಮಂದಿ ರೈಲ್ವೆ ಗ್ಯಾಂಗ್‌ಮನ್ನರು ಗೂಡ್ಸ್ ಟ್ರೈನಿಗೆ ಸಿಕ್ಕಿ ಸಾವಿಗೀಡಾಗಿದ್ದಾರೆ.

ಹನ್ನೊಂದು ಮಂದಿ ಘಟನೆಯ ಸ್ಥಳದಲ್ಲೂ ಇನ್ನೊಬ್ಬನು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೂ ಸಾವಿಗೀಡಾದರು.

ADVERTISEMENT

ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲಾಗಿದೆ.

ರೈಲ್ವೆ ಹಾದಿಯ ಪ್ರದೇಶದಲ್ಲಿ ಇನ್ನು ಕಗ್ಗತ್ತಲಿನಲ್ಲಿದ್ದಾಗ ಬೆಳಗಿನ ಜಾವ ಐದೂಕಾಲು ಗಂಟೆಯಲ್ಲಿ ಈ ದುರಂತ ಸಂಭವಿಸಿತು.

ಧರೆಯ ಕಲ್ಲಿನ ರೂಪು ಹೋಲುವ ಚಂದ್ರ ಶಿಲೆ

ಹೂಸ್ಟನ್, ಆ. 10– ಅಪೋಲೊ 10ರ ಗಗನಯಾತ್ರಿಗಳು ಚಂದ್ರಲೋಕದಿಂದ ತಂದಿರುವ ಶಿಲೆಗಳಲ್ಲಿನ ಚಂದ್ರಶಿಲೆಯ ತುಣುಕೊಂದು ಭೂಮಿಯ ಮೇಲಿನ ಕಲ್ಲನ್ನು ಹೋಲುತ್ತಿದೆ. ಇದರಿಂದ ಚಂದ್ರನ ಇತಿಹಾಸ ಹೆಚ್ಚು ಸಂಕೀರ್ಣವಾಗಿದ್ದಿರಬಹುದೆಂದು ವಿಜ್ಞಾನಿಗಳು ಭಾವಿಸಲು ಅವಕಾಶವಾಗಿದೆ.

ಒಂದು ಕೆ.ಜಿ. ತೂಕದ ಬೂದುಬಣ್ಣದ ಚಂದ್ರಶಿಲೆಯನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಪರೀಕ್ಷಿಸಿದ ಬಾಹ್ಯಾಕಾಶ ಸಂಸ್ಥೆಯ ಭೂಗರ್ಭ ಶಾಸ್ತ್ರಜ್ಞ ಡಾ. ಜೆಫ್ ವಾರ್ನರ್ ಅವರು ಈ ಶಿಲೆಯಲ್ಲಿ ಆಲಿವಿನ್, ಪೈರೋಕ್ಸಿಸ್ ಮತ್ತು ಫೆಸ್ಟ್‌ಸ್ಟಾರ್ ಖನಿಜಗಳನ್ನು ಗುರುತಿಸಿರುವುದಾಗಿ ನಿನ್ನೆ ಇಲ್ಲಿ ತಿಳಿಸಿದರು.

ಇಂದಿರಾ ‘ಸರ್ವಾಧಿಕಾರ’ ಪ್ರಜಾಸತ್ತೆಗೆ ಕುತ್ತು: ಮುಧೋಕ್ ಆರೋಪ

ಚಂಡೀಗಢ, ಆ. 10– ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರನ್ನು ‘ಮರಿ ಸರ್ವಾಧಿಕಾರಿ’ ಎಂದು ಕರೆದ ಜನಸಂಘದ ನಾಯಕ ಶ್ರೀ ಬಲರಾಜ್ ಮುಧೋಕ್ ಅವರು, ‘ಭಾರತದ ಪ್ರಜಾಸತ್ತೆಗೆ ಪ್ರಧಾನಿಯವರು, ಭಾರಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಇಲ್ಲಿ ತಿಳಿಸಿದರು.

ಪ್ರಜಾಸತ್ತೆಯನ್ನು ರಕ್ಷಿಸಲು ಜನತೆಯು ಇಂದಿರಾಗಾಂಧಿಯವರ ಲಂಗು ಲಗಾಮು ಇಲ್ಲದ ಕ್ರಮಗಳನ್ನು ಹತ್ತಿಕ್ಕಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.