ADVERTISEMENT

50 ವರ್ಷಗಳ ಹಿಂದೆ| ಗುರುವಾರ, 18–12–1969

ಗುರುವಾರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:34 IST
Last Updated 17 ಡಿಸೆಂಬರ್ 2019, 19:34 IST

ರಾಜಕೀಯಕ್ಕೆ ಅನ್ವಯಿಸದ ಹೊಸ ರೀತಿಯ ಸ್ಥಾನಬದ್ಧತೆ ಶಾಸನ ಜಾರಿಗೆ ತರಲು ಕ್ರಮ

ನವದೆಹಲಿ, ಡಿ. 17– ವರ್ಷಾಂತ್ಯದ ನಂತರವೂ ಮುನ್ನೆಚ್ಚರಿಕೆ ಸ್ಥಾನಬದ್ಧತೆ ಶಾಸನವನ್ನು ಮಾರ್ಪಟ್ಟ ರೀತಿಯಲ್ಲಿ ಉಳಿಸಿಕೊಂಡು ಬರುವಂಥ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ತೀವ್ರವಾಗಿ ಆಲೋಚಿಸುತ್ತಿದೆ. ಈ ತಿಂಗಳ ಅಂತ್ಯಕ್ಕೆ ಶಾಸನದ ಅವಧಿ ಮುಗಿಯುತ್ತದೆ.

ಮಾರ್ಪಟ್ಟ ಶಾಸನವು ಪಶ್ಚಿಮ ಬಂಗಾಳವೂ ಸೇರಿ, ದೇಶದ ಈಶಾನ್ಯ ಭಾಗಗಳಿಗೆ ಅನ್ವಯವಾಗುವುದು ಮತ್ತು ಭಾರತದ ಭದ್ರತೆಗೆ ಭಂಗ ತರುವಂಥ ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದು.

ADVERTISEMENT

ಮುಖ್ಯಮಂತ್ರಿಗಳ ವಿರುದ್ಧ ಕ್ಷಾಮ ಪರಿಹಾರ ನಿಧಿಯ ದುರುಪಯೋಗ ಆರೋಪ

ಬೆಂಗಳೂರು, ಡಿ. 17– ತಮ್ಮ ಹಿಂಬಾಲಕರು ಅಹಮದಾಬಾದ್ ಕಾಂಗ್ರೆಸ್ ಅಧಿವೇಶನಕ್ಕೆ ಹೋಗುವುದಕ್ಕಾಗಿ ಸಹಾಯ ಮಾಡಲು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕ್ಷಾಮ ಪರಿಹಾರ ನಿಧಿಯನ್ನು ‘ದುರುಪ‍ಯೋಗ ಮಾಡಿದ್ದಾರೆ’ ಎಂದು ಪ್ರಧಾನಿ ಕಾಂಗ್ರೆಸ್ಸಿನ ಪ್ರಮುಖ ವ್ಯವಸ್ಥಾಪಕರಲ್ಲಿ ಒಬ್ಬರಾದ ಶ್ರೀ ಎಂ.ವಿ. ಕೃಷ್ಣಪ್ಪನವರು ಆಪಾದಿಸಿದ್ದಾರೆ.

ಬಿಜಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೊಸದಾಗಿ ಕೆಲಸ ನಡೆಸದೆ ಹಳೆಯ ತಾಕುಗಳನ್ನೇ ಮತ್ತೆ ಅಳೆದು ಕ್ಷಾಮ ಪರಿಹಾರಕ್ಕಾಗಿ ಕೇಂದ್ರ ಹಣದಿಂದ ಪಾವತಿ ಮಾಡಲಾಗಿದೆಯೆಂದು ತಮಗೆ ವರದಿಗಳು ಬಂದಿವೆಯೆಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆಲವೇ ಗುಂಪುಗಳ ಕೈಯಲ್ಲಿ ವ್ಯಾಪಕ ಕೈಗಾರಿಕೆ ಸಲ್ಲದು: ಫಕ್ರುದ್ದೀನ್

ನವದೆಹಲಿ, ಡಿ. 17– ಕೆಲವೇ ಜನರ ಕೈಯಲ್ಲಿ ಸಂಪತ್ತು ಮತ್ತು ಆರ್ಥಿಕ ಶಕ್ತಿ ಕೇಂದ್ರೀಕೃತವಾಗುವುದನ್ನು ತಪ್ಪಿಸುವುದೇ ಏಕಸ್ವಾಮ್ಯ ಮತ್ತು ನಿರ್ಬಂಧಿತ ವಾಣಿಜ್ಯ ಪದ್ಧತಿ ಮಸೂದೆಯ ಮೂಲೋದ್ದೇಶ ವಾಗಿದೆ ಎಂದು ಕೇಂದ್ರ ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್ ಅಲಿ ಅಹಮದ್ ಅವರು ಇಂದು ಲೋಕಸಭೆಗೆ ತಿಳಿಸಿದರು.

ವ್ಯಾಪಕ ಕೈಗಾರಿಕೆಗಳಲ್ಲಿ ಕೆಲವೇ ಗುಂಪುಗಳವರು ಹರಡುವುದನ್ನು ತಪ್ಪಿಸುವುದೇ ಈ ಮಸೂದೆಯ ಗುರಿ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.