ADVERTISEMENT

ಭಾನುವಾರ, 20–10–1968

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:51 IST
Last Updated 19 ಅಕ್ಟೋಬರ್ 2018, 19:51 IST

ರಾಯದುರ್ಗದ ಬಳಿ ಕೋಹಿನೂರ್‌ಗಿಂತ ಭಾರಿ ವಜ್ರ ಪತ್ತೆ

ಹೈದರಾಬಾದ್, ಅ. 19–ಅನಂತಪುರ ಜಿಲ್ಲೆಯ ರಾಯದುರ್ಗ ಮತ್ತು ಕಲ್ಯಾಣದುರ್ಗದ ನಡುವೆ 96 ಕ್ಯಾರೆಟ್‌ ತೂಕದ ಅತ್ಯಮೂಲ್ಯ ವಜ್ರ ಸಿಕ್ಕಿದೆ.

ಆಂಧ್ರಪ್ರದೇಶದ ಗೋಲ್ಕೊಂಡ ಭೂಗರ್ಭದಿಂದ ಬೆಳಕು ಕಂಡು ಈಗ ಬ್ರಿಟಿಷ್ ಸಾಮ್ರಾಜ್ಞಿಯ ಕಿರೀಟಧಾರಣೆ ಮಾಡಿರುವ ಕೋಹಿನೂರ್‌ಗಿಂತಲೂ ಇದು ದೊಡ್ಡದೆಂದು ಹೇಳಲಾಗಿದೆ.

ADVERTISEMENT

ಇಂದು ಇಲ್ಲಿ ಪತ್ರಕರ್ತರಿಗೆ ಈ ವಿಷಯ ಪ್ರಕಟಿಸಿದ ರಾಜ್ಯ ಕೃಷಿಮಂತ್ರಿ ಪಿ. ತಿಮ್ಮಾರೆಡ್ಡಿ ಹೆಚ್ಚಿನ ವಿವರಗಳೇನನ್ನೂ ನೀಡಲಿಲ್ಲ. ಇದನ್ನು ಪತ್ತೆ ಹಚ್ಚಿದವರು ಯಾರು? ಈಗ ಯಾರ ಬಳಿ ಇದೆ? ಎನ್ನುವುದನ್ನೂ ಹೇಳಲಿಲ್ಲ.

ನಾನಾ ಮೂಲಗಳಿಂದ ಬಂದಿರುವ ಸುದ್ದಿಗಳನ್ನು ಆಧರಿಸಿ ‘ವಜ್ರ ಸಿಕ್ಕಿರುವುದು ನಿಜ’ ಎಂದಷ್ಟೇ ಹೇಳಿದರು.

ಪ್ರಪ್ರಥಮವಾಗಿ ಬೀಳುವ ಭಾರಿ ಮಳೆ ನಂತರ ಈ ಪ್ರದೇಶದಲ್ಲಿ ಸಣ್ಣಪುಟ್ಟ ವಜ್ರಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ. ಆಂಧ್ರಪ್ರದೇಶದ ಕಡಪ ಸುತ್ತಮುತ್ತ ಅಗಾಧವಾಗಿ ವಜ್ರಗಳ ನಿಕ್ಷೇಪ ಇರುವುದಾಗಿ ಇತ್ತೀಚೆಗೆ ಭಾಷಣ ಒಂದರಲ್ಲಿ ಪ್ರಸಿದ್ಧ ವಿಜ್ಞಾನಿ ಡಾ. ಸಿ.ವಿ. ರಾಮನ್ ಹೇಳಿದ್ದರು.

‘ಗೋಲ್ಕೊಂಡ ಎಂದರೆ ವಜ್ರಗಳ ಕಣಜ’ ಎನ್ನುವುದು ಪ್ರತೀತಿ. ಒಂದು ಕಾಲದಲ್ಲಿ ಕೃಷ್ಣಾ–ಭೀಮಾ ದಂಡೆಯಲ್ಲಿರುವ ವಜ್ರಗಳ ಗಣಿಗಳಲ್ಲಿ 60,000 ಕೆಲಸಗಾರರು ಕಾರ್ಯನಿರತರಾಗಿದ್ದರು.

ರಾಜ್ಯೋತ್ಸವದಂದು 14 ಮಂದಿ ಸೇವಾ ಧುರೀಣರಿಗೆ ಪದಕ

ಬೆಂಗಳೂರು, ಅ. 19– ನವೆಂಬರ್ ಮೊದಲ ದಿನವನ್ನು ರಾಜ್ಯೋತ್ಸವವನ್ನಾಗಿ ರಾಜ್ಯಾದ್ಯಂತ ಆಚರಿಸಲು ರಾಜ್ಯ ಸರಕಾರವು ಐವತ್ತು ಸಾವಿರ ರೂಪಾಯಿಯನ್ನು ಮಂಜೂರು ಮಾಡಿದೆ.

ರಾಜ್ಯೋತ್ಸವ ಅಂಗವಾಗಿ ಅಂದು ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ 1967ರಲ್ಲಿ ಸರಕಾರ ಪ್ರಕಟಿಸಿರುವ 14 ಮಂದಿ ಮಹನೀಯರಿಗೆ ರಜತ ಪದಕಗಳನ್ನು ವಿನಿಯೋಗಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.