ಏಳನೇ ವಿಕೆಟ್ಟಿಗೆ ಸೆಂಚುರಿ ಜೊತೆ ಆಟ
ಜೈಪುರ, ಮಾರ್ಚ್ 25– ಶ್ರೇಷ್ಠ ಮಟ್ಟದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಕಿರ್ಮಾನಿ (60) ಹಾಗೂ ಎ.ವಿ. ಜಯಪ್ರಕಾಶ್ (ಔಟಾಗದೆ 51) ಅವರು 7ನೇ ವಿಕೆಟ್ ಜೋಡಿಯಲ್ಲಿ ಸೇರಿಸಿದ 114 ರನ್ನುಗಳ ನೆರವಿನಿಂದ ರಾಜಸ್ಥಾನದ ಮೇಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ.
ರಾಜಸ್ಥಾನ ತಂಡವನ್ನು 176 ರನ್ನಿಗೆ ಔಟ್ ಮಾಡಿ 100 ರನ್ನು ಮೊದಲ ಇನ್ನಿಂಗ್ಸ್ ಲೀಡ್ ಗಿಟ್ಟಿಸಿದ ಕರ್ನಾಟಕ ತಂಡದವರು 3ನೇ ದಿನದ ಆಟ ಮುಗಿದಾಗ ತಮ್ಮ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿದ್ದು, ಒಟ್ಟು 297 ರನ್ನು ಮುಂದೆ ಇದ್ದಾರೆ.
ಪೊಲೀಸರ ಕಾರ್‍ಯದಲ್ಲಿ ಪುಢಾರಿಗಳ ಪ್ರವೇಶ ಬೇಡ: ಅರಸು ಮನವಿ
ಬೆಂಗಳೂರು, ಮಾರ್ಚ್ 25– ‘ಹೆಜ್ಜೆ ಹೆಜ್ಜೆಗೆ ತೊಡಕು. ಅವರನ್ನು ಅಲ್ಲಿಗೆ ವರ್ಗ ಮಾಡಿ, ಇವರನ್ನು ಹಿಡಿಯಿರಿ, ಅವರನ್ನು ಬಿಡಿ ಎಂದು ಪ್ರಭಾವ ಬೀರುವುದು. ಪುಢಾರಿಗಳು ಮತ್ತು ರಾಜಕೀಯ ಮುಖಂಡರಿಂದಲೇ ಗೊಂದಲಮಯ ವಾತಾವರಣ ಸೃಷ್ಟಿ’– ಪೊಲೀಸರು ಕಾನೂನು ಮತ್ತು ಶಾಂತಿ ಪಾಲನೆ ಮಾಡಲು ಅಡ್ಡಿಗಳು ಬರುತ್ತಿರುವ ಬಗ್ಗೆ ಮುಖ್ಯಮಂತ್ರಿ ಡಿ.ದೇವರಾಜ ಅರಸು ಇಂದು ಇಲ್ಲಿ ವಿಷಾದಿಸಿ, ‘ದಯವಿಟ್ಟು ಪೊಲೀಸರ ಕಾರ್‍ಯದಲ್ಲಿ ಮಧ್ಯಪ್ರವೇಶಿಸಿ ಅವರ ಹೆಸರಿಗೆ ಕಳಂಕ ತರಬೇಡಿ’ ಎಂದು ಎಲ್ಲ ವರ್ಗದ ಮುಖಂಡರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.