ಬೆಂಗಳೂರು, ಡಿ. 1– ‘ಅಳಿಸಿ ಹಾಕಿಸಿದವನು ನಾನು. ಅದು ನಿಜ. ನಿಜಲಿಂಗಪ್ಪನವರಿಗೆ ಗೊತ್ತಿಲ್ಲದಂತೆ ಅಳಿಸಿ ಹಾಕಿದೆನೆಂಬುದು ನಿಜವಲ್ಲ’.
ಮಾಜಿ ಲೋಕೋಪಯೋಗಿ ಸಚಿವ ಎಚ್.ಕೆ. ವೀರಣ್ಣಗೌಡರ ಪ್ರತಿಕ್ರಿಯೆ ಇದು.
ವಿಧಾನಸೌಧ ನಿರ್ಮಾಣ ಪೂರ್ತಿಯಾದುದು 1956ರಲ್ಲಿ. ನಿರ್ಮಾಣ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ದ್ವಾರದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದ್ದರು.
ನಿಜಲಿಂಗಪ್ಪನವರ ಮಂತ್ರಿಮಂಡಲ ಅಧಿಕಾರದಲ್ಲಿದ್ದಾಗ ಆ ಬರಹವನ್ನು ಅಳಿಸಿ ಹಾಕಿಸಲಾಯಿತು. ಆಗ ವೀರಣ್ಣಗೌಡರು ಲೋಕೋಪಯೋಗಿ ಸಚಿವರಾಗಿದ್ದರು.
ಅಳಿಸಿ ಹಾಕಿಸಿದಾಗ ಅದು ಸಾಕಷ್ಟು ವಾಗ್ವಾದಕ್ಕೆ ಎಡೆಕೊಟ್ಟಿತು.
ವಿಧಾನಸೌಧದ ಮೇಲೆ ಹನುಮಂತಯ್ಯನವರು ಬರೆಸಿದ ಸುಭಾಷಿತಗಳನ್ನು ಅಳಿಸಿಹಾಕಲು ತಾವು ಹೊಣೆಯಲ್ಲವೆಂದೂ, ತಮಗೆ ಗೊತ್ತಿಲ್ಲದ ಹಾಗೆ ಆಗಿನ ಲೋಕೋಪಯೋಗಿ ಸಚಿವ ಎಚ್.ಕೆ. ವೀರಣ್ಣಗೌಡರು ಆ ಕೆಲಸವನ್ನು ಮಾಡಿಸಿದರೆಂದೂ ನಿಜಲಿಂಗಪ್ಪನವರು ಮಡಿಕೇರಿಯಲ್ಲಿ ಹೇಳಿದರೆಂದು ಪತ್ರಿಕಾ ವರದಿ.
ವರದಿಗೆ ವೀರಣ್ಣಗೌಡರ ಪ್ರತಿಕ್ರಿಯೆ; ‘ಅಳಿಸಿ ಹಾಕುವ ವಿಷಯವನ್ನು ನಿಜಲಿಂಗಪ್ಪನವರ ಗಮನಕ್ಕೆ ಒಂದಲ್ಲ ಎರಡು ಬಾರಿ ತಂದಿದ್ದೆ’.
ಅಳಿಸಿ ಹಾಕಿದ ಹಿನ್ನೆಲೆಯನ್ನು ಗೌಡರು ಇಂದು ‘ಪ್ರಜಾವಾಣಿ’ಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.