ADVERTISEMENT

50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
   

ಬೆಂಗಳೂರು, ಮಾರ್ಚ್ 18– ಪಾದರಕ್ಷೆ, ಮೈಸಾಬೂನು, ಸೈಕಲ್ ಹಾಗೂ ಟ್ರೈಸಿಕಲ್, ಸೋಡಾ, ಕನ್‌ಫೆಕ್ಷನರಿ, ಕೇಕ್ ಹಾಗೂ ಬಿಸ್ಕತ್ತಿನ ಮೇಲೆ ತಾವು ವಿಧಿಸಲು ಉದ್ದೇಶಿಸಿದ್ದ ಶೇಕಡ 2ರಷ್ಟು ಮಾರಾಟ ತೆರಿಗೆಯ ಸೂಚನೆಯನ್ನು ವಾಪಸು ತೆಗೆದುಕೊಳ್ಳುವುದಾಗಿ ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಅದೇ ರೀತಿಯಲ್ಲಿ ಕೋಳಿ ಹಾಗೂ ಜಾನುವಾರು ಆಹಾರ ಮತ್ತು ತೊಗಲಿನ ಮೇಲೆ ಉದ್ದೇಶಿತ ಶೇಕಡ ಒಂದರಷ್ಟು ತೆರಿಗೆಯನ್ನು ಹೇರಲು ತಾವು ಬಯಸುವುದಿಲ್ಲ ಎಂದು ಅವರು ಬಜೆಟ್ ಮೇಲಿನ ಆರು ದಿನಗಳ ಸಾಮಾನ್ಯ ಚರ್ಚೆಗೆ ಉತ್ತರ ನೀಡಿದಾಗ ತಿಳಿಸಿದರು.

ಮಾರಾಟ ತೆರಿಗೆ ಅನ್ವಯವಾಗುವ ಈ ಸಾಮಗ್ರಿಗಳನ್ನು ಬಿಟ್ಟರೆ, ಬೇರೆ ಯಾವುದೇ ವಸ್ತುವಿನ ಮೇಲಿನ ತೆರಿಗೆ ಇಲ್ಲವೇ ಅಬಕಾರಿ, ಮನರಂಜನೆ, ನಗರ ಜಮೀನು ತೆರಿಗೆ ಅಥವಾ ವಾಹನ ತೆರಿಗೆಗಳಲ್ಲಿ ರಿಯಾಯಿತಿ ತೋರಲು ಸಚಿವರು ಒಪ್ಪಲಿಲ್ಲ.

ADVERTISEMENT

ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳ ಮಾನ್ಯತೆ ರದ್ದಾಗದು: ಕಳವಳ ಅನಗತ್ಯ

ಬೆಂಗಳೂರು, ಮಾರ್ಚ್ 18– ರಾಜ್ಯದಲ್ಲಿ ಐದು ಮೆಡಿಕಲ್ ಕಾಲೇಜುಗಳಿಗೆ ಮಾನ್ಯತೆ ರದ್ದುಗೊಳಿಸಿ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಮಾಡಿರುವ ನಿರ್ಣಯವು ವಾಸ್ತವಾಂಶಗಳ ಆಧಾರದ ಮೇಲಿಲ್ಲ ಎಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಇಂದು ಪ್ರತಿಪಾದಿಸಿದ ಆರೋಗ್ಯ ಸಚಿವ
ಎಚ್.ಸಿದ್ಧವೀರಪ್ಪ ಅವರು, ಆ ನಿರ್ಣಯ ನಮ್ಮ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಘೋಷಿಸಿದರು.

ಮಾನ್ಯತೆ ರದ್ದುಗೊಳಿಸುವ ಬಗ್ಗೆ ಮೆಡಿಕಲ್ ಕೌನ್ಸಿಲ್‌ನ ನಿರ್ಣಯದ ಸುದ್ದಿಯನ್ನು ಪ್ರಸ್ತಾಪಿಸಿ ಸದಸ್ಯರು ಕಳವಳ ವ್ಯಕ್ತಪಡಿಸಿದಾಗ ಹೇಳಿಕೆ ನೀಡಿದ ಸಚಿವರು, ಸುದ್ದಿಯ ಬಗ್ಗೆ ಕಳವಳ ಬೇಕಿಲ್ಲವೆಂದೂ ರಾಜ್ಯದಲ್ಲಿ ವಿದ್ಯಾರ್ಥಿಗಳ ಮತ್ತು ವೈದ್ಯಕೀಯ ಶಿಕ್ಷಣದ ಹಿತರಕ್ಷಣೆಗೆ ಸರ್ಕಾರ ಸರ್ವಪ್ರಯತ್ನ ಕೈಗೊಳ್ಳುವುದೆಂದೂ ಹೇಳಿದರು.

ನಿರ್ಣಯದ ಬಗ್ಗೆ ರಾಜ್ಯ ಸರ್ಕಾರದ ಆತಂಕವನ್ನು ವ್ಯಕ್ತಪಡಿಸಿ ಈಗಾಗಲೇ ಕೇಂದ್ರಕ್ಕೆ ತಂತಿ ಸಂದೇಶ ಕಳುಹಿಸಲಾಗಿದೆ ಎಂದರು.

ವಿರೋಧಪಕ್ಷದ ನಾಯಕರ ಆಪಾದನೆ ನಿರಾಕರಣೆ

ಬೆಂಗಳೂರು, ಮಾರ್ಚ್ 18– ಉತ್ತರದ ಜಿಲ್ಲೆಗಳ ಅಭಾವ ಪರಿಹಾರ ಕಾಮಗಾರಿಗಳಲ್ಲಿ 20 ಕೋಟಿ ರೂಪಾಯಿಗಳ ದುರ್ವಿನಿಯೋಗ ಆಗಿದೆ ಎಂಬ ವಿರೋಧಪಕ್ಷದ ನಾಯಕರ ಆಪಾದನೆಗಳನ್ನು ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ನಿರಾಕರಿಸಿದರು.

ಕಳೆದ 2 ವರ್ಷಗಳಲ್ಲಿ ಖರ್ಚಾದ ಒಟ್ಟು ಹಣ 62.60 ಕೋಟಿ ರೂಪಾಯಿ. ಈ ಪೈಕಿ ಕೇಂದ್ರ 43 ಕೋಟಿ ನೀಡಿದೆ. ಉಳಿದ 20 ಕೋಟಿಗಳಲ್ಲಿ 5 ಕೋಟಿಗಳನ್ನು ರಾಜ್ಯವೇ ವಹಿಸಿಕೊಳ್ಳಬೇಕಾದದ್ದು. 10 ಕೋಟಿ ಯಂತ್ರೋಪಕರಣಗಳ ಖರ್ಚು; ಅದೂ ರಾಜ್ಯದ್ದೇ. ಉಳಿದ ಐದು ಕೋಟಿ ರೂಪಾಯಿ ಕೇಂದ್ರವು ವೆಚ್ಚ ವಹಿಸದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ (1973) ವೆಚ್ಚ ಎಂದು ಸಚಿವರು ಲೆಕ್ಕ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.