ADVERTISEMENT

50 ವರ್ಷಗಳ ಹಿಂದೆ | ಖದೀಮರಿಗೆ ರಾಜಮರ್ಯಾದೆ! ಕೇಂದ್ರ ಸರ್ಕಾರ ಆತಂಕ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 23:30 IST
Last Updated 29 ಸೆಪ್ಟೆಂಬರ್ 2024, 23:30 IST
   

ಖದೀಮರಿಗೆ ರಾಜಮರ್ಯಾದೆ! ಕೇಂದ್ರ ಸರ್ಕಾರ ಆತಂಕ

ನವದೆಹಲಿ, ಸೆ.29– ಆಂತರಿಕ ಭದ್ರತಾ ಶಾಸನದ ಪ್ರಕಾರ ಈಚೆಗೆ ಬಂಧಿಸಿದ ಭಾರಿ ಕಳ್ಳಸಾಗಾಣಿಕೆದಾರರಲ್ಲಿ ಕೆಲವರಿಗೆ ಕಾರಾಗೃಹಗಳಲ್ಲಿ ಗಣ್ಯರಂತೆ ನೋಡಿಕೊಂಡು ಉಪಚರಿಸಲಾಗುತ್ತಿದೆಯೆಂದು ಕೆಲವು ರಾಜ್ಯಗಳಿಂದ ಬಂದಿರುವ ವರದಿಗಳಿಂದ ಕೇಂದ್ರ ಸರ್ಕಾರ ತೀವ್ರವಾಗಿ ಕಳವಳಗೊಂಡಿದೆ.

ಈ ವರದಿಗಳು ಬಂದ ನಂತರ ಅವರಿಗೆ ಕಾನೂನಿನಲ್ಲಿರುವುದಕ್ಕಿಂತ ಹೆಚ್ಚಿನ ಸೌಲಭ್ಯಗಳೇನನ್ನೂ ಒದಗಿಸಕೊಡದೆಂದು ಕೇಂದ್ರವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆಯೆಂದು ಬಲ್ಲ ವಲಯಗಳಿಂದ ತಿಳಿದುಬಂದಿದೆ.

ADVERTISEMENT

ಕೇರಳದಿಂದ ಅತ್ಯಂತ ಕಳವಳಕರ ವರದಿ ಬಂದಿದೆಯನ್ನಲಾಗಿದೆ. ಭಾರಿ ಕಳ್ಳ ಸಾಗಾಣಿಕೆದಾರನೆಂದು ಅಧಿಕೃತ ವಲಯಗಳು ವರ್ಣಿಸಿರುವ ಕೆ. ಎಸ್. ಅಬ್ದುಲ್ಲಾಗೆ ಕಳೆದ ವಾರ ಆತನ ಬಂಧನವಾದ ನಂತರ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ರಾಜಮರ್ಯಾದೆ ಕೊಡಲಾಯಿತೆನ್ನಲಾಗಿದೆ.

ಸಂಸತ್ ಸದಸ್ಯನಿಗೆ ಪಾದರಕ್ಷೆ ಹಾರ, ಕತ್ತೆ ಸವಾರಿ

ರಾಯಪುರ, ಸೆ.29– ಶನಿವಾರ ಗಾಯಿಗಢ ಜಿಲ್ಲೆಯ ಕಾರ್ಸಿಯಾ ಪಟ್ಟಣದಲ್ಲಿ ಉದ್ರಿಕ್ತ ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಂಸತ್ ಸದಸ್ಯ ಉಮದ್‌ಸಿಂಗ್ ರಾಥಿಯಾ ಎಂಬುವರ ಮುಖಕ್ಕೆ ಕಪ್ಪು ಬೂಟ್‌ಪಾಲಿಷ್ ಬಳಿದು, ಕುತ್ತಿಗೆಗೆ ಪಾದರಕ್ಷೆಗಳ ಹಾರ ಹಾಕಿ ಅವರನ್ನು ಕತ್ತೆಯ ಮೇಲೆ ಕೂಡಿಸಿ ಮೆರವಣಿಗೆ ನಡೆಸಿದರೆಂದು ಇಂದು ಬೆಳಿಗ್ಗೆ ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.

ಸಂಸತ್ ಸದಸ್ಯ ಉಮದ್‌ಸಿಂಗ್ ರಾಥಿಯಾ ಅವರು ಅಭಾವ ಪರಿಸ್ಥಿತಿಯಲ್ಲಿ ತಮ್ಮ ಕ್ಷೇತ್ರದ ಜನಕ್ಕೆ ಸೇವೆಸಲ್ಲಿಸುವುದರಲ್ಲಿ ವಿಫಲರಾದರೆಂದು  ವಿದ್ಯಾರ್ಥಿಗಳ ದೂರು. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿದರೆನ್ನಲಾಗಿದೆ. ಮೆರವಣಿಗೆ ನಂತರ ವಿದ್ಯಾರ್ಥಿಗಳು ರಾಥಿಯಾ ಅವರನ್ನು ಸುರಕ್ಷಿತವಾಗಿ ಬಿಟ್ಟರೆನ್ನಲಾಗಿದೆ.

ರಾಥಿಯಾ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಪೊಲೀಸರು ಅವರನ್ನು ಭೇಟಿ ಮಾಡಿದಾಗ ತಾವು ಜನತಾ ಪ್ರತಿನಿಧಿಯೆಂದೂ ಜನರು ಎಂಥ ಮನಸ್ಥಿತಿಯಲ್ಲಿದ್ದರೂ ಅವರನ್ನು ಬರಮಾಡಿಕೊಳ್ಳಲು ತಾವು ಸಿದ್ಧವೆಂದೂ ರಾಥಿಯಾ ತಿಳಿಸಿದರೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.