ಕರ್ನಾಟಕ ‘ತಡೆಹಿಡಿದ’ ಕಾವೇರಿ ನೀರನ್ನು ಬಿಡಲು ಒತ್ತಾಯ
ಮದರಾಸು, ಜುಲೈ 29– ಕರ್ನಾಟಕವು ‘ಕಾನೂನು ವಿರುದ್ಧ ತಡೆಹಿಡಿದಿರುವ’ 10 ಟಿ.ಎಂ.ಸಿ. (ಅಂದರೆ ಸಹಸ್ರ ಕೋಟಿ ಘನ ಅಡಿ) ನೀರನ್ನು ಕೃಷ್ಣರಾಜ ಸಾಗರದಿಂದ ಬಿಡುಗಡೆ ಮಾಡಲು ಒತ್ತಾಯ ತರಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಕೇಂದ್ರವನ್ನು ಕೋರಿದ್ದಾರೆ.
ಬೆಂಗಳೂರು ವರದಿ: ‘ಕಾವೇರಿ ಜಲವಿವಾದ ಸಂಬಂಧದಲ್ಲಿ ತಮಿಳುನಾಡಿಗೆ ಇನ್ನೂ ಒಪ್ಪಿಗೆ ಇಲ್ಲದಿರುವುದು ವಿಷಾದಕರ’ ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಶ್ರೀ ಚನ್ನಬಸಪ್ಪ ಅವರು ಹೇಳಿದರು.
‘ಇರುವ ಮಾಹಿತಿಗಳನ್ನೆಲ್ಲ ಈಗಾಗಲೇ ಕರ್ನಾಟಕವು, ತಮಿಳುನಾಡು ಸರ್ಕಾರದ ಮುಂದೆ ಮಂಡಿಸಿದೆ. ಅದು ತೀರಾ ಸ್ಪಷ್ಟವಾಗಿದೆ’ ಎಂದು ಹೇಳಿದ ಚನ್ನಬಸಪ್ಪ ಅವರು, ‘ಆದರೆ ಪ್ರಧಾನಿಯವರೊಡನೆ ಈ ಬಗ್ಗೆ ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ. ಕರುಣಾನಿಧಿ ಅವರಿಗೆ ಅಧಿಕಾರ ಇದೆ’ ಎಂದರು.
ಅಸ್ಪೃಶ್ಯತಾ ಪ್ರಕರಣಗಳ ತನಿಖೆಗೆ ಐಜಿಪಿ ಕಚೇರಿಯಲ್ಲಿ ವಿಶೇಷ ವಿಭಾಗದ ರಚನೆ
ಬೆಂಗಳೂರು, ಜುಲೈ 29– ಹರಿಜನರಿಗೆ ಕಿರುಕುಳ ಕೊಡುವುದು, ಅವರ ಮೇಲೆ ಹೀನಕೃತ್ಯ ನಡೆಸುವುದು ಹಾಗೂ ಅಸ್ಪೃಶ್ಯತಾ ಪ್ರಕರಣಗಳನ್ನು ವ್ಯವಹರಿಸಲು ಐ.ಜಿ.ಪಿ. ಕಚೇರಿಯಲ್ಲಿ ವಿಶೇಷ ವಿಭಾಗವನ್ನು ರಚಿಸಲಾಗುವುದು.
ಈ ಸಂಬಂಧದಲ್ಲಿ ಸರ್ಕಾರಕ್ಕೆ ಐ.ಜಿ.ಪಿ. ಅವರು ಕೆಲವು ಸಲಹೆಗಳನ್ನು ಕಳುಹಿಸಿಕೊಟ್ಟಿದ್ದಾರೆ.
ವಿಶೇಷ ವಿಭಾಗವು ಪೊಲೀಸ್ ಸೂಪರಿಂಡೆಂಟ್ ಅವರ ನೇತೃತ್ವದಲ್ಲಿರುವುದೆಂದು ಇಂದು ಬೆಳಿಗ್ಗೆ ಐ.ಜಿ.ಪಿ. ಶ್ರೀ ಸಿ.ವಿ. ರಾವ್ ಅವರು ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿ, ಈ ವಿಭಾಗದಲ್ಲಿ ಎಸ್.ಪಿ. ಅವರ ಕೈಕೆಳಗೆ ಡೆಪ್ಯೂಟಿ ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರು, ಇಬ್ಬರು ಇನ್‌ಸ್ಪೆಕ್ಟರ್‌ಗಳು, 4 ಸಬ್ ಇನ್‌ಸ್ಪೆಕ್ಟರ್‌ಗಳು, 4 ಮಂದಿ ಹೆಡ್ ಕಾನ್‌ಸ್ಟೆಬಲ್‌ಗಳು, 8 ಮಂದಿ ಕಾನ್‌ಸ್ಟೆಬಲ್‌ಗಳು ಕೆಲಸ ಮಾಡುವರೆಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.