ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 28–7–1970

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 20:50 IST
Last Updated 27 ಜುಲೈ 2020, 20:50 IST

ಟಾಟಾ, ಬಿರ್ಲಾ ಸಂಸ್ಥೆಗಳಿಗೆ ಲೈಸೆನ್ಸ್‌ ವಿತರಣೆ ವಿರುದ್ಧ ಎಲ್ಲ ಪಕ್ಷಗಳ ಕಟುಟೀಕೆ

ನವದೆಹಲಿ, ಜುಲೈ 27– ಟಾಟಾ ಮತ್ತು ಬಿರ್ಲಾಗಳಿಗೆ ಕೈಗಾರಿಕೆ ಯೋಜನೆಗಳಿಗಾಗಿ ಅನುಮತಿ ಕೊಟ್ಟುದಕ್ಕಾಗಿ ಸರ್ಕಾರವು ಆಡಳಿತ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳ ಸದಸ್ಯರಿಂದ ಇಂದು ರಾಜ್ಯಸಭೆಯಲ್ಲಿ ತೀವ್ರ ಟೀಕೆಗೆ ಗುರಿಯಾಯಿತು.

ರೋಷಾವಿಷ್ಟ ಸಭೆಯನ್ನು ಎದುರಿಸಬೇಕಾಗಿ ಬಂದ ಕಂಪನಿ ವ್ಯವಹಾರಗಳ ಸಚಿವ ಕೆ.ವಿ.ರಘುನಾಥ ರೆಡ್ಡಿ ಅವರು ಲೈಸೆನ್ಸ್‌ಗಳಿಗಾಗಿ ಪ್ರಧಾನಿ ಹಣ ಪಡೆಯುತ್ತಿದ್ದಾರೆಂಬ ಆರೋಪಗಳನ್ನು ಅಲ್ಲಗಳೆದು ಆಡಿದ ಮಾತುಗಳು ಗಲಾಟೆಯಲ್ಲಿ ಮುಳುಗಿಹೋದವು.

ADVERTISEMENT

ಲೈಸೆನ್ಸ್‌ ವಿಷಯವೇ ಪ್ರಾಧಾನ್ಯವಾಗಿದ್ದ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಆಡಳಿತ ಕಾಂಗ್ರೆಸ್ಸಿನ ಚಂದ್ರಶೇಖರ್‌ ಅವರು, ಸರ್ಕಾರವು ಏಕಸ್ವಾಮ್ಯ ಶಾಸನವನ್ನು ಅಕ್ಷರಶಃ ಕಾರ್ಯಗತಗೊಳಿಸದೆ ಕರ್ತವ್ಯಚ್ಯುತಿ ಮತ್ತು ಜನವಂಚನೆ ಎಸಗಿರುವುದಾಗಿ ಆಪಾದಿಸಿದರು. ಬಿರ್ಲಾ ಸಂಸ್ಥೆಗಳ ವಿರುದ್ಧದ ಆರೋಪಗಳ ಬಗೆಗೆ ವಿಚಾರಣಾ ಆಯೋಗವೊಂದಿರುವಾಗ ಅವರಿಗೆ ಲೈಸೆನ್ಸ್‌ಗಳನ್ನು ಕೊಟ್ಟಿದ್ದೇಕೆ ಎಂದು ಅವರು ಪ್ರಶ್ನಿಸಿದರು.

ಪ್ರಧಾನಿ ಮನೆ ಮುಂದೆ ಒರಿಸ್ಸಾ ಎಂ.ಪಿ.ಗಳ ಧರಣಿ

ನವದೆಹಲಿ, ಜುಲೈ 27– ನಾಲ್ಕನೇ ಯೋಜನೆಯಲ್ಲಿ ಒರಿಸ್ಸಾದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಬೇಡಿಕೆಗೆ ಒತ್ತಾಯಪಡಿಸಲು ಇಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಮನೆ ಮುಂದೆ ಆ ರಾಜ್ಯಕ್ಕೆ ಸೇರಿದ ಪಾರ್ಲಿಮೆಂಟ್‌ ಸದಸ್ಯರು ಬೆಳಿಗ್ಗೆ 9 ಗಂಟೆಯಿಂದ ಧರಣಿ ಹೂಡಿದರು.

ರಾಷ್ಟ್ರೀಯ ಹಿತಾಸಕ್ತಿಯಂತೆ ಒರಿಸ್ಸಾದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆ ನ್ಯಾಯಸಮ್ಮತವಾದುದೆಂದು, ಧರಣಿಗೆ ಮುನ್ನ ನಡೆದ ಮೆರವಣಿಗೆಯ ಆರಂಭದಲ್ಲಿ ಪಿ.ಎಸ್‌.ಪಿ. ಅಧ್ಯಕ್ಷ ಎನ್‌.ಜಿ.ಗೋರೆ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.