ADVERTISEMENT

ಕೇರಳದಲ್ಲಿ ಕೇಂದ್ರ ಮಧ್ಯಪ್ರವೇಶ ಸನ್ನಿಹಿತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:49 IST
Last Updated 5 ಜನವರಿ 2019, 19:49 IST

ಕೇರಳದಲ್ಲಿ ಕೇಂದ್ರ ಮಧ್ಯಪ್ರವೇಶ ಸನ್ನಿಹಿತ

ತಿರುವನಂತಪುರ, ಜ.5– ಕೇರಳದಲ್ಲಿ ಕಾನೂನುಬಾಹಿರ ಕ್ರಮಗಳು ಮತ್ತು ಅರಾಜಕತೆ ಕುರಿತು ತಮಗೆ ಕೇಳಿ
ಬರುತ್ತಿರುವುದು ನಿಜವಾದರೆ ‘ಇಲ್ಲಿ ಕೇಂದ್ರದ ಮಧ್ಯಪ್ರವೇಶ ತೀರಾ ಸನ್ನಿಹಿತವಾಗುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಎಸ್‌.ನಿಜಲಿಂಗಪ್ಪನವರು ಇಂದು ಇಲ್ಲಿ ನುಡಿದರು.

ಪತ್ರಕರ್ತರೊಡನೆ ಮಾತನಾಡುತ್ತಿದ್ದ ಶ್ರೀ ನಿಜಲಿಂಗಪ್ಪನವರು ಈ ಸಂಬಂಧದಲ್ಲಿ ತಾವು ಸರ್ವಾಧಿಕಾರಿಯಂತೆ ಕೇಂದ್ರಕ್ಕೆ ಆಜ್ಞೆ ಮಾಡಲಾಗದೆಂದೂ ತಾವು ತಮ್ಮ ಅಭಿಪ್ರಾಯ ಮಾತ್ರ ವ್ಯಕ್ತಪಡಿಸಿರುವುದಾಗಿಯೂ ನುಡಿದರು. ರಾಜ್ಯದ ಸಮಸ್ಯೆಗಳ ಇತ್ಯರ್ಥಕ್ಕೆ ಮೂರು ಮಾರ್ಗ ಮಾತ್ರ ಇದೆಯೆಂದು ಅವರು ನುಡಿದು ವೈಯುಕ್ತಿಕ ಆಸ್ತಿಪಾಸ್ತಿ ಮುಂತಾದವುಗಳ ಮೇಲೆ ಮುತ್ತಿಗೆ ಸಂವಿಧಾನ ಮತ್ತು ಶಾಸನದ ಉಲ್ಲಂಘನೆಯಾದುದರಿಂದ ಸರಕಾರಕ್ಕೆ ವಿವೇಕೋದಯವಾಗಿ ಈ ಬಗೆಗೆ ಕ್ರಮ ತೆಗೆದುಕೊಳ್ಳಬೇಕೆಂದೂ,ಅದು ತಪ್ಪಿ
ದರೆ ಸರಕಾರವನ್ನು ಕೊನೆಗಾಣಿಸಲು ಜನತೆ ಚಳವಳಿ ಹೂಡಬೇಕೆಂದೂ ಕೇಂದ್ರದ ಮಧ್ಯಪ್ರವೇಶ ತೃತೀಯ ಮಾರ್ಗವೆಂದು ಹೇಳಿದರು.

ADVERTISEMENT

ವಿಮಾನ ಅಪಘಾತ: ಸತ್ತ 50 ಜನರಲ್ಲಿ ಭಾರತೀಯರೇ ಹೆಚ್ಚು

ಲಂಡನ್‌, ಜ.5– ಲಂಡೆನ್ನಿನ ಗ್ಯಾಟ್‌ನಿಕ್‌ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಇಳಿಯಲು ಬರುತ್ತಿದ್ದ ಅಫ್‌ಘನ್‌ ಏರ್‌ಲೈನ್ಸ್‌ ವಿಮಾನ ಮನೆಯೊಂದಕ್ಕೆ ಅಪ್ಪಳಿಸಿದಾಗ ಬೆಂಕಿ ಹತ್ತಿಕೊಂಡಿತು. ವಿಮಾನದಲ್ಲಿದ್ದವರಲ್ಲಿ ಕಡೆಯ ಪಕ್ಷ 50 ಮಂದಿ ಅನಾಹುತದಲ್ಲಿ ಸತ್ತರು.

ಅಮೃತಸರದಿಂದ ಹೊರಟ ಈ ವಿಮಾನದ ಪ್ರಯಾಣಿಕರಲ್ಲಿ ಭಾರತೀಯರೇ ಹೆಚ್ಚಾಗಿದ್ದರು.

ಮುಸ್ಲಿಂ ಜಿಲ್ಲೆ ರಚನೆ ತಡೆಯಲು ಸರಕಾರಕ್ಕೆ ಕರೆ

ತಿರುವನಂತಪುರ, ಜ. 5– ಮಸ್ಲಿಂ ಬಹುಸಂಖ್ಯಾ ಮಲಪ್ಪುರಂ ಜಿಲ್ಲೆ ರಚನೆಯನ್ನು ಕೇರಳ ಸರಕಾರ ಅನೇಕ
ಕಾರಣಗಳಿಗಾಗಿ ತಡೆ ಹಿಡಿಯಬೇಕೆಂದು ಕಾಂಗ್ರೆಸ್‌ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ಇಂದು ಇಲ್ಲಿ
ಪತ್ರಿಕಾ ಗೋಷ್ಠಿಯೊಂದರಲ್ಲಿ ನುಡಿದರು.

ಹೊಸ ಜಿಲ್ಲೆ ತಮಗೆ ಹಿತಸಾಧಕವಲ್ಲವೆಂದು ಅನೇಕ ಮುಸ್ಲಿಮರೇ ತಮಗೆ ತಿಳಿಸಿ ಅಸಂತೋಷ ವ್ಯಕ್ತಪಡಿಸಿರುವುದಾಗಿ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.