ADVERTISEMENT

ಸೋಮವಾರ, 18–8–1969

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:00 IST
Last Updated 17 ಆಗಸ್ಟ್ 2019, 20:00 IST

ತಮ್ಮ ಯಾವ ಕ್ರಮವೂ ಕಮ್ಯುನಿಸ್ಟ್‌ ಪ್ರೇರಿತವಲ್ಲ ಎಂದು ಇಂದಿರಾನವದೆಹಲಿ, ಆ. 17– ತಮ್ಮನ್ನು ಕಮ್ಯುನಿಸ್ಟ್ ಎಂದು ಹೆಸರಿಸಿ ತಮ್ಮ ಸರ್ಕಾರ ಕೈಗೊಂಡಿರುವ ಕೆಲವು ಕ್ರಮಗಳನ್ನು ಕಮ್ಯುನಿಸ್ಟ್ ಪ್ರೇರಿತ ಎಂದು ವರ್ಣಿಸಿರುವವರನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಖಂಡಿಸಿದರು.

ತಾವು ಮಾಡುತ್ತಿರುವ ಕೆಲವು ಕೆಲಸಗಳು ಕಮ್ಯುನಿಸ್ಟರಿಗೆ ಒಪ್ಪಿಗೆಯಾಗಿದ್ದರೆ ಅದಕ್ಕೆ ತಮ್ಮನ್ನು ದೂಷಿಸಬೇಕಾಗಿಲ್ಲ. ಪ್ರಗತಿಪರ ಕ್ರಮಗಳಿಗಾಗಿ ಅವರು ಸರ್ಕಾರಕ್ಕೆ ಬೆಂಬಲವಿತ್ತಿದ್ದಲ್ಲಿ ಅವನ್ನು ಸ್ವಾಗತಿಸಬೇಕು. ಆದರೆ, ತಾವು ಕೈಗೊಂಡ ಕ್ರಮಗಳಲ್ಲಿ ಯಾವುದೇ ಕ್ರಮಕ್ಕೂ ಕಮ್ಯುನಿಸ್ಟರಿಂದ ಮೇಲ್ಪಂಕ್ತಿಯನ್ನು ಪಡೆದಿಲ್ಲ. ಬದಲು ಕಮ್ಯುನಿಸ್ಟರು ತಮ್ಮ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದಾರೆ ಎಂದು ಇಂದಿರಾ ಗಾಂಧಿ ಹೇಳಿದರು.

ಪ್ರಧಾನಿ ವಿರುದ್ಧ ತಕ್ಷಣ ಕ್ರಮಕ್ಕೆ ಗುಜರಾತ್ ಕಾಂಗ್ರೆಸ್ ಒತ್ತಾಯಅಹ್ಮದಾಬಾದ್, ಆ. 17– ರಾಷ್ಟ್ರಪತಿ ಚುನಾವಣೆಯ ಸಮಯದಲ್ಲಿ ಅಕ್ಷೇಪಾರ್ಹ ಹಾಗೂ ಹೊಣೆಗೇಡಿತನದ ಕ್ರಮಗಳನ್ನು ಕೈಗೊಂಡು, ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವುದಕ್ಕಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ವಿರುದ್ಧ ತತ್‌ಕ್ಷಣವೇ ಕ್ರಮ ಕೈಗೊಳ್ಳಲು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ವಿಶೇಷ ಸಭೆಯು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಇಂದು ಮನವಿ ಮಾಡಿಕೊಂಡಿತು.

ADVERTISEMENT

ಸಂಸ್ಥೆಯ ಆದೇಶಗಳನ್ನು ಬಹಿರಂಗವಾಗಿ ಧಿಕ್ಕರಿಸಿ ಕಾಂಗ್ರೆಸ್ಸಿನಲ್ಲಿ ಈಗ ಬಿಕ್ಕಟ್ಟು ತಲೆದೋರಲು ಕಾರಣವಾಗಿರುವ ಕಾಂಗ್ರೆಸಿಗರ ವಿರುದ್ಧ ಕಾರ್ಯಕಾರಿ ಸಮಿತಿಯು ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಪ್ರದೇಶ ಕಾಂಗ್ರೆಸ್ ಸಮಿತಿಯು ನಿರ್ಣಯವೊಂದರ ಮೂಲಕ ಒತ್ತಾಯಪಡಿಸಿದೆ.

ಬ್ಲೇಬರ್ಗ್ ನಿಧನ

ಕೇಪ್‌ಟೌನ್, ಆ. 17– ಬದಲಿ ಹೃದಯವನ್ನು ಶಸ್ತ್ರ ಚಿಕಿತ್ಸೆ ಮೂಲಕ ಪಡೆದು ಸುದೀರ್ಘ ಕಾಲ (ಹತ್ತೊಂಬತ್ತು ತಿಂಗಳು) ಜೀವಿಸಿದ್ದ ಫಿಲಪ್‌ ಬ್ಲೇಬರ್ಗ‌್ ಇಂದು ಇಲ್ಲಿ ಗ್ರೂಟ್‌ಸುರ್ ಆಸ್ಪತ್ರೆಯಲ್ಲಿ ರಾತ್ರಿ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬ್ಲೇಬರ್ಗ್ ಅವರಿಗೆ ಕಳೆದ ವರ್ಷ ಜನವರಿ ಎರಡರಂದು ವರ್ಣೀಯನೊಬ್ಬನ ಹೃದಯವನ್ನು ಅಳವಡಿಸಲಾಗಿತ್ತು. ಬ್ಲೇಬರ್ಗ್ ನಿಧನದ ಕಾರಣ ಈ ಬಗ್ಗೆ ಕೂಡಲೆ ಯಾವ ಹೇಳಿಕೆಯನ್ನು ಹೊರಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.