ADVERTISEMENT

ಪ್ರಜಾವಾಣಿ 25 ವರ್ಷದ ಹಿಂದೆ| ಭಾನುವಾರ, 22 ಮಾರ್ಚ್‌ 1988

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:30 IST
Last Updated 21 ಮಾರ್ಚ್ 2023, 19:30 IST
   

ಕಳಪೆ ಕೀಟನಾಶಕ ಸಂಸ್ಥೆ ಮಾಲೀಕರಿಗೆ ಜೈಲು ಶಿಕ್ಷೆ

ಬೆಂಗಳೂರು, ಮಾರ್ಚ್‌ 21– ಕಳಪೆ ಹಾಗೂ ನಕಲಿ ಕೀಟ ನಾಶಕಗಳನ್ನು ತಯಾರಿಸಿ ರೈತರಿಗೆ ಸರಬರಾಜು ಮಾಡುತ್ತಿರುವ ಕಂಪನಿಗಳ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರದ ನೂತನ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಬಾಬಾ ಗೌಡ ಪಾಟೀಲರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ಈ ಸಂಬಂಧದಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.

ADVERTISEMENT

‘ಕಳಪೆ ಹಾಗೂ ನಕಲಿ ಕೀಟ ನಾಶಕಗಳಿಂದಾಗಿ ದೇಶದ ಕೃಷಿ ಉತ್ಪನ್ನಗಳು ನಾಶವಾಗುತ್ತಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಬೆಳೆ ಹಾನಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ. ಹಾಲಿ ಇರುವ ಕಾನೂನು ಬಿಗಿಯಾಗಿಲ್ಲ. ಇದರಿಂದಾಗಿ ಕಳಪೆ ಕೀಟನಾಶಕಗಳನ್ನು ತಯಾರಿಸಿ ಸರಬರಾಜು ಮಾಡಿದ ಕಂಪನಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದು, ರೈತರ ಹಿತ ಕಾಪಾಡಲು ಬಿಗಿಯಾದ ಹೊಸ ಕಾಯ್ದೆ ಜಾರಿಗೆ ತರುವುದು ಅನಿವಾರ್ಯವಾಗಲಿದೆ’ ಎಂದು ಅವರು ಹೇಳಿದರು.

ಯೋಜನಾ ಆಯೋಗ ಉಪಾಧ್ಯಕ್ಷ ಜಸ್ವಂತ್‌ ಸಿಂಗ್‌

ನವದೆಹಲಿ, ಮಾರ್ಚ್‌ 21 (ಪಿಟಿಐ)– ಕೇಂದ್ರದಲ್ಲಿ ಅಧಿಕಾರದ ಸೂತ್ರ ಹಿಡಿದಿರುವ ಪ್ರಧಾನಿ ಎ.ಬಿ.ವಾಜಪೇಯಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಹಣಕಾಸು ಸಚಿವರಾಗಲಿದ್ದಾರೆ ಎಂದು ಸುದ್ದಿ ಮಾಡಿದ್ದ ಬಿಜೆಪಿ ನಾಯಕ ಜಸ್ವಂತ್‌ ಸಿಂಗ್ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಇಂದು ನೇಮಿಸಲಾಗಿದೆ.

1996ರಲ್ಲಿ ಕೇವಲ 13 ದಿನಗಳ ಕಾಲ ಅಧಿಕಾರದಲ್ಲಿ ಇದ್ದ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.