ADVERTISEMENT

25 ವರ್ಷಗಳ ಹಿಂದೆ: ಬುಧವಾರ, 24–9–1997

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 19:30 IST
Last Updated 24 ಸೆಪ್ಟೆಂಬರ್ 2022, 19:30 IST
   

ಬಿಳಿ ನವಿಲಿಗೆ ಮರಿ ಮೃಗಾಲಯದಲ್ಲಿ ಸಂಭ್ರಮ
ಮೈಸೂರು, ಸೆ. 23–
ಮೈಸೂರು ಮೃಗಾಲಯದಲ್ಲಿ ಈಗ ಹಕ್ಕಿಗಳ ಸಂಭ್ರಮ, ನಾಟ್ಯ ವೈಭವ.

ಮೊನ್ನೆ ಎಂಟು ಹಕ್ಕಿಮರಿಗಳು ಹುಟ್ಟಿ ಈ ವೈಭವವನ್ನು ಹೆಚ್ಚಿಸಿವೆ. ಬಿಳಿ ನವಿಲಿನ ಮೊಟ್ಟೆಗಳು ಒಡೆದು ಮೂರು ಮರಿಗಳು ಹೊರಬಂದಿವೆ. ಕಂದು ಬಣ್ಣದ ಪೆಲಿಕನ್‌ನ ಒಂದು ಮರಿ ಇದೇ ಹೊತ್ತಿಗೆ ಹೊರಬಂದಿದೆ. ಗಿನಿಕೋಳಿಯ ನಾಲ್ಕು ಮೊಟ್ಟೆಗಳು ಮರಿಗಳಾಗಿವೆ.

ಬಿಳಿ ನವಿಲಿನ ಮರಿಗಳು ಸುಲಭವಾಗಿ ಹೊರಬಂದಿಲ್ಲ. 28 ದಿನಗಳ ಕಾಲ ತಾಯಿ ನವಿಲು ಕಾವು ಕೊಟ್ಟಿದ್ದು ಕಾರಣವಾಗಿ ಈ ಮರಿಗಳು ಹೊರಬಂದಿವೆ. ಒಂದು ದಶಕದ ಕಾಲ ಈ ಮೃಗಾಲಯದಲ್ಲಿ ಬಿಳಿ ನವಿಲು ಮೊಟ್ಟೆಗಳು ಮರಿಯಾದ ಉದಾಹರಣೆಗಳೇ ಇಲ್ಲ. ಹೀಗಾಗಿ ಈ ಬಿಳಿ ನವಿಲ ಮರಿಗಳಿಂದಾಗಿ ಮೃಗಾಲಯ ಸಂಭ್ರಮಿಸುತ್ತಿದೆ. ಇದೇ ರೀತಿ ಮೃಗಾಲಯದಲ್ಲಿ ಕಂದು ಬಣ್ಣದ ಪೆಲಿಕನ್‌ ಮರಿ ಹುಟ್ಟಿರುವುದು ಕೂಡಾ ಮೊದಲ ಬಾರಿಗೆ.

ADVERTISEMENT

ಕಾಶ್ಮೀರ ವಿವಾದ ಪರಿಹಾರ ಅಮೆರಿಕ ಮಧ್ಯಸ್ಥಿಕೆ ಇಲ್ಲ

ನ್ಯೂಯಾರ್ಕ್, ಸೆ. 23 (ಯುಎನ್‌ಐ, ಪಿಟಿಐ)– ಕಾಶ್ಮೀರ ವಿಷಯದಲ್ಲಿ ಭಾರತ ದೇಶವು ಪಾಕಿಸ್ತಾನದೊಂದಿಗೆ ಹೊಂದಿರುವ ಭಿನ್ನಾಭಿಪ್ರಾಯದ ಬಗ್ಗೆ ಅಮೆರಿಕ ಮಧ್ಯ ಪ್ರವೇಶಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ಆಶ್ವಾಸನೆ ನೀಡಿದ್ದಾರೆ.

ಪ್ರಧಾನಿ ಗುಜ್ರಾಲ್‌ ಅವರ ಜತೆ ನಿನ್ನೆ ನಡೆದ ಭೇಟಿ ಸಮಯದಲ್ಲಿ ಕ್ಲಿಂಟನ್‌ ಅವರು ಈ ಆಶ್ವಾಸನೆ ನೀಡಿದರು. ಈ ಆಶ್ವಾಸನೆ ನೀಡುವ ಮೂಲಕ ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶದ ಭಾರತದ ಭೀತಿಯನ್ನು ಅವರು ಹೋಗಲಾಡಿಸಿದರು. ಕಾಶ್ಮೀರ ವಿಷಯವನ್ನು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಇಬ್ಬರೂ ನಾಯಕರಿಗೆ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಅರಿವಿದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.