ADVERTISEMENT

50 ವರ್ಷಗಳ ಹಿಂದೆ: ಗುರುವಾರ, 13-5-1971

​ಪ್ರಜಾವಾಣಿ ವಾರ್ತೆ
Published 12 ಮೇ 2021, 19:30 IST
Last Updated 12 ಮೇ 2021, 19:30 IST
   

ಕೈಗಾರಿಕೆ ಲೈಸೆನ್ಸ್‌: ಸರಳ ವಿಧಾನಗಳ ಜಾರಿಗೆ ಸಲಹೆ
ನವದೆಹಲಿ, ಮೇ 12–
ಕೈಗಾರಿಕೆ ಲೈಸೆನ್ಸ್‌ ಕೋರಿ ಬರುವ ಅರ್ಜಿಗಳನ್ನು ವರಿಷ್ಠ ಮಟ್ಟದಲ್ಲಿ ಪರಿಶೀಲಿಸಿ ಇತ್ಯರ್ಥಗೊಳಿಸುವುದರ ಮೂಲಕ ಕೈಗಾರಿಕೆ ಲೈಸೆನ್ಸ್‌ ನೀಡಿಕೆ ವಿಧಾನವನ್ನು ಸರಳಗೊಳಿಸುವ ಸಲಹೆಯನ್ನು ಕೇಂದ್ರ ಕೈಗಾರಿಕೆ ಅಭಿವೃದ್ಧಿ ಸಚಿವ ಶಾಖೆ ಪರಿಶೀಲಿಸುತ್ತಿದೆ.

ಈಗಿರುವ ವಿಧಾನದಂತೆ ಅರ್ಜಿಗಳನ್ನು ಗುಮಾಸ್ತೆಯಿಂದ ಹಿಡಿದು ಅನೇಕ ಮಂದಿ ಅಧಿಕಾರಿಗಳು ಅನೇಕ ಹಂತಗಳಲ್ಲಿ ಪರಿಶೀಲಿಸುತ್ತಿದ್ದಾರೆ. ಇದನ್ನು ತಪ್ಪಿಸಿ ಉನ್ನತಾಧಿಕಾರಿ ಮಟ್ಟದಲ್ಲಿ ಮಾತ್ರ ಅರ್ಜಿಗಳ ಪರಿಶೀಲನೆ ನಡೆಸಬೇಕು. ಏನಾದರೂ ಟೀಕೆಗಳಿದ್ದಲ್ಲಿ ತಕ್ಷಣವೇ ಸಮಜಾಯಿಷಿ ನೀಡಿ ಇತ್ಯರ್ಥಗೊಳಿಸಬಹುದೆಂದು ಕೇಂದ್ರ ಸಲಹಾ ಮಂಡಳಿಯ ಸ್ಥಾಯಿ ಸಮಿತಿ ಸಲಹೆ ನೀಡಿದೆ.

ರಣಹದ್ದುಗಳ ಜಯ ಶಾಶ್ವತವೆ?
ಢಾಕಾ, ಮೇ 12–
ಗಂಗಾ ನದಿಯ ಉದ್ದಕ್ಕೂ ರಣಹದ್ದುಗಳ ಹಾರಾಟ. ಮಾರ್ಚ್‌ 25ರಿಂದ ಅವುಗಳಿಗೆ ತಿಂದು ತೇಗುವಷ್ಟು ಆಹಾರ. ಕುಕ್ಕಿತಿಂದು ಕಟರೆಯಾಗುವಷ್ಟು ಹೆಣಗಳ ಬಣವೆ. ಕೊಲೆಯಾದ ಐದು ಲಕ್ಷಕ್ಕಿಂತ ಹೆಚ್ಚು ಮಂದಿ ಪಾಕಿಸ್ತಾನೀಯರ ಶವಗಳನ್ನು ಕಂಡು ಅವುಗಳಿಗೂ ಒಂದು ಬಗೆಯ ಭೀಕರ ಅನುಭವ.

ADVERTISEMENT

ದಿವಾಳಿತನದ ರಾಷ್ಟ್ರವನ್ನು ಅದರ ಅಂತ್ಯದ ಅಂಚಿಗೆ ನೂಕುವ ಅಂತರ್ಯುದ್ಧ ಪಾಕಿಸ್ತಾನದ ಪೂರ್ವ ವಿಭಾಗದಲ್ಲಿ ಪ್ರಾರಂಭವಾದುದು ಮಾರ್ಚ್‌ 25ರಂದು. ಅಂದಿನಿಂದ ಅಪಾರವಾದ ದುರದೃಷ್ಟಕರ ಆರ್ಥಿಕ ನಷ್ಟ, ಅಸಂಖ್ಯ ಸಾವು–ನೋವು. ಮಾನವೀಯತೆಯಲ್ಲೇ ನಂಬಿಕೆ ಅಳಿದು ಹೋಗುವಂತಹ ದುಷ್ಕೃತ್ಯ ಪರಂಪರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.