75 ವರ್ಷಗಳ ಹಿಂದೆ
ಸಾಧುಗಳಿಗೂ ಪೊಲೀಸರಿಗೂ ಹೊಡೆದಾಟ; 17 ಮಂದಿಗೆ ಗಾಯ
ಪುರಿ, ಜುಲೈ 18– ರಥೋತ್ಸವಕ್ಕೆ ಬಂದಿದ್ದ ಅನೇಕ ಸಾಧುಗಳಿಗೂ ಪೊಲೀಸರಿಗೂ ಹೊಡೆದಾಟವಾಗಿ ಒಟ್ಟು 17 ಮಂದಿಗೆ ಪೆಟ್ಟು ಬಿತ್ತು. ಇಬ್ಬರು ಪೊಲೀಸರಿಗೆ ತೀವ್ರ ಗಾಯಗಳಾಗಿವೆ. ಘರ್ಷಣಾಂತರ ಅನೇಕ ಸಾಧುಗಳನ್ನು ಪೊಲೀಸರು ಬಂಧಿಸಿದರು.
ಮೊದಲ ಮೂರು ರಥಗಳು ತಮ್ಮ ಗುರಿಯನ್ನು ಮುಟ್ಟಿದಾಗ ಸಾಧುವೊಬ್ಬರು ಹೇಳದೇ ಕೇಳದೇ ರಥ ಹತ್ತಿದರೆಂದು ಆಗ ಕಾವಲಿದ್ದ ಪೊಲೀಸರು ಅವರನ್ನು ಹಿಡಿದೆಳೆದರೆಂದು ಹೊಡೆದಾಟ ಸಂಭವಿಸಿತೆಂದು ವರದಿ.
ಇಳಿಸಲ್ಪಟ್ಟ ಸಾಧು ಹತ್ತಿರದಲ್ಲಿ ಸಾಧುಗಳು ಬೀಡುಬಿಟ್ಟಿದ್ದ ಪಕ್ಕದ ತೋಟಕ್ಕೆ ಓಡಿದ್ದರು. ಒಡನೆ ಸಾಧುಗಳೆಲ್ಲ ನುಗ್ಗಿ ಬಂದು ಪೊಲೀಸರನ್ನು ಮುತ್ತಿ ಕಮಂಡಲಗಳಿಂದಲೂ ಚಂಬುಗಳಿಂದಲೂ ಹೊಡೆಯತೊಡಗಿದರು. ಪೊಲೀಸರ ಬಳಿ ದೊಣ್ಣೆಗಳಿರಲಿಲ್ಲ. ಆದರೆ ಜನ ಅವರ ನೆರವಿಗೆ ಬಂದರು.
ಭಾರತಕ್ಕೆ ಬರ್ಮಾ ಅಕ್ಕಿ, ಆಸ್ಟ್ರೇಲಿಯಾ ಗೋಧಿ
ಮದರಾಸ್, ಜುಲೈ 18– 8304 ಟನ್ ಆಸ್ಟ್ರೇಲಿಯಾ ಗೋಧಿ, 7,118 ಟನ್ ಬರ್ಮಾ ಅಕ್ಕಿ ಕಳೆದ ವಾರ ಮದರಾಸ್ ಮತ್ತು ಕೊಚ್ಚಿ ರೇವುಗಳಿಗೆ ಬಂದಿದೆ. ಈ ಪೈಕಿ ಮೈಸೂರಿಗೆ 500 ಟನ್ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.