ವಾಚಕರ ವಾಣಿ
ಎರಡು ದಶಕಗಳಿಂದ ರಾಜ್ಯ ಆಯುಷ್ ಇಲಾಖೆಗೆ ಕಾಯಂ ನಿರ್ದೇಶಕರೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಜನರ ಕೆಲಸಗಳು ಹೇಗೆ ನಡೆಯುತ್ತವೆ? ತಾತ್ಕಾಲಿಕವಾಗಿ ಒಬ್ಬರಾದ ಮೇಲೆ ಒಬ್ಬರಂತೆ ನಿರ್ದೇಶಕರ ಹುದ್ದೆಯಲ್ಲಿ ಕೂರುವ ಅಧಿಕಾರಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಸರ್ಕಾರವೇ ಕಣ್ಣುಮುಚ್ಚಿ ಕುಳಿತರೆ, ಇಲಾಖೆಯ ಪ್ರಗತಿ ಕಷ್ಟಸಾಧ್ಯ. ಇಲಾಖೆಯು ಪರಭಾರೆ ಆಗುತ್ತಿರುವಾಗ, ವಿಧಾನಸೌಧದ ಮುಂಭಾಗ ಉಪವಾಸ ಕುಳಿತು, ಸ್ವತಂತ್ರ ಆಯುಷ್ ಇಲಾಖೆಯನ್ನು ಪಡೆಯಲು ಹೋರಾಟ ಮಾಡಿದವರ ಹೊಟ್ಟೆ ಉರಿಯುವುದು ಯಾರಿಗೂ ಕಾಣುವುದಿಲ್ಲ.
–ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ
ರಾಜ್ಯದ ಸರ್ಕಾರಿ ಪ‍್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೀಘ್ರವೇ 25 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಆಗಾಗ್ಗೆ ಕಾರ್ಯಕ್ರಮಗಳಲ್ಲಿ ಹೇಳುವುದು ವರದಿ ಆಗುತ್ತಿದೆ. ಆದರೆ, ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಮುಂದುವರಿದಿದೆ. ಗ್ರಾಮೀಣ ಶಾಲೆಗಳಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ತ್ವರಿತವಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕಿದೆ.
–ರವಿ ಎಸ್.ಎಂ., ಮೈಸೂರು
ದೇಶದ ಸಂಪತ್ತನ್ನು ಸೂರೆ ಮಾಡುವವರಲ್ಲಿ ರಾಜಕಾರಣಿಗಳಷ್ಟೇ ಅಲ್ಲ, ಸರ್ಕಾರಿ ಇಲಾಖೆಯ ಉನ್ನತ ಅಧಿಕಾರಿಗಳ ಪಾಲೂ ಇದೆ. ಐ.ಟಿ, ಇ.ಡಿ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಭ್ರಷ್ಟ ಅಧಿಕಾರಿಗಳು ಸಂಪಾದಿಸಿರುವ ಅಕ್ರಮ ಸಂಪತ್ತಿನ ಅನಾವರಣವಾಗುತ್ತದೆ. ಅದು ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿಯಾಗುತ್ತದೆ. ಬಳಿಕ ಆ ಪ್ರಕರಣ ಏನಾಯಿತು ಎಂಬುದೇ ಜನರಿಗೆ ತಿಳಿಯುವುದಿಲ್ಲ.
ವಿದೇಶಿ ಆಕ್ರಮಣಕಾರರು ದೇಶವನ್ನು ಲೂಟಿ ಹೊಡೆದ ಇತಿಹಾಸವನ್ನು ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಬೋಧಿಸಲಾಗುತ್ತದೆ. ಸ್ವಾತಂತ್ರ್ಯಾ ನಂತರ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವವರು ಯಾರು ಎನ್ನುವುದು ಉತ್ತರ ದೊರಕದೆ ಉಳಿದ ಪ್ರಶ್ನೆಯಾಗಿದೆ.
–ಮಹಾಂತೇಶ ಬೇತೂರು, ದಾವಣಗೆರೆ
‘ಮುಟ್ಟು: ಮೂಢನಂಬಿಕೆ ಕೊನೆಯಾಗಲಿ’ ಲೇಖನವು (ಲೇ: ರಾಜಕುಮಾರ ಕುಲಕರ್ಣಿ, ಪ್ರ.ವಾ., ಜುಲೈ 29) ಮೌಢ್ಯದ ಬಗ್ಗೆ ಬೆಳಕು ಚೆಲ್ಲಿದೆ. ಆದರೆ, ‘ಮುಟ್ಟು’ ಎಂಬ ಪದ ಸಕಾರಾತ್ಮಕ ಅರ್ಥ ಕಳೆದುಕೊಂಡಿದೆ; ಮುಟ್ಟಿಸಿಕೊಳ್ಳದಿರುವ, ಹೊರಗಿಡುವ, ಮೌಢ್ಯವನ್ನು ಸಮರ್ಥಿಸುವ ಹೀನಾರ್ಥ ಪಡೆದುಕೊಂಡಿದೆ. ಈ ಮೌಢ್ಯದ ವಿರುದ್ಧ ಜಾಗೃತಿಯ ಆರಂಭಿಕ ಹೆಜ್ಜೆಯಾಗಿ ‘ಮುಟ್ಟು’ ಪದವನ್ನೇ ಬಳಸದಿರುವ ಬಗ್ಗೆ ಯೋಚಿಸುವುದು ಉತ್ತಮ. ಈ ಪದಕ್ಕೆ ಬದಲಾಗಿ ಮಾಸಿಕ ಋತುಸ್ರಾವ, ರಜಸ್ವಾಲೆ ಪದಗಳನ್ನು ಬಳಸಬಹುದು. ಆ ಮೂಲಕ, ನಿಸರ್ಗ ಸಹಜ ಜೈವಿಕ ಪ್ರಕ್ರಿಯೆಯೊಂದನ್ನು ಹೊರಗಿಡುವುದರ ಬದಲಾಗಿ ಒಳಗೊಳ್ಳುವುದರತ್ತ ಮೊದಲ ಹೆಜ್ಜೆ ಇಡೋಣ.
–ಜ್ಯೋತಿಕುಮಾರಿ ಕೆ.ವಿ., ಶಿವಮೊಗ್ಗ
ಪ್ರತಿ ವರ್ಷವೂ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದಾಗ ಕಂಪ್ಲಿ– ಗಂಗಾವತಿ ನಡುವಿನ ಸಂಪರ್ಕ ಕಡಿತಗೊಳ್ಳುತ್ತದೆ. ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ನಂತರ ಯಥಾಪ್ರಕಾರ ಸಂಪರ್ಕ ಶುರುವಾಗುತ್ತದೆ. ನದಿ ಪಾತ್ರದ ಮನೆಗಳ ಬಳಿ ವಿಷಜಂತುಗಳ ದರ್ಶನ, ಕೋಟೆ ಪ್ರದೇಶದ ಹೊಳೆ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗುವುದು, ಕೋಟೆ ಬಳಿಯ ಸ್ಮಶಾನದ ಹಾದಿ ಜಲಾವೃತ, ಯುವಜನರ ‘ಸೆಲ್ಫಿ ಹುಚ್ಚಾಟ’ ಇತ್ಯಾದಿ ಸುದ್ದಿಗಳನ್ನು ಬಾಲ್ಯದಿಂದಲೂ ಪತ್ರಿಕೆಗಳಲ್ಲಿ ಓದುತ್ತಿದ್ದೇನೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗುವ ಕೆಳಸೇತುವೆಯ ಜೊತೆ ಜೊತೆಗೆ ಎತ್ತರದ, ಸರ್ವಋತು ಮತ್ತು ಶಾಶ್ವತವಾದ ಮೇಲ್ಸೇತುವೆ ನಿರ್ಮಾಣದತ್ತ ಸರ್ಕಾರ ಗಮನಹರಿಸದಿರುವುದು ಸೋಜಿಗವೇ ಸರಿ.
–ಪರಮೇಶ್ವರ ಜೆ.ಎಂ., ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.