ADVERTISEMENT

ಮಂಗಳವಾರ, 30–09–1969

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:00 IST
Last Updated 29 ಸೆಪ್ಟೆಂಬರ್ 2019, 20:00 IST

ನಗರ ವಾರ್ಸಿಟಿ ಸೆನೆಟ್‌ ಸಭೆಯಲ್ಲಿ ಗೊಂದಲ

ಬೆಂಗಳೂರು, ಸೆ. 29: ಮೈಸೂರು ರಾಜ್ಯದ ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಬ್ಬರು ಸದಸ್ಯರು ಅನುಚಿತವಾಗಿ ವರ್ತಿಸಿ, ಕುಲಪತಿಯತ್ತ ಗಾಜಿನ ಪೇಪರ್‌ವೇಟ್‌ ತೂರಿದ ಘಟನೆ ಇಂದು ಬೆಂಗಳೂರು ವಿಶ್ವವಿದ್ಯಾನಿಲಯ ಸೆನೆಟ್‌ ಸಭೆಯಲ್ಲಿ ನಡೆಯಿತು.

ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ನಡೆದ ವಿದ್ಯಮಾನಗಳನ್ನು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಸಭೆಯನ್ನು ರದ್ದುಗೊಳಿಸಿದಾಗ ಅಸಮಾಧಾನಗೊಂಡ ಕೆಲವು ಸದಸ್ಯರು ಉದ್ರೇಕದಿಂದ ವರ್ತಿಸಿದರು.

ADVERTISEMENT

ಸದಸ್ಯರೊಬ್ಬರು ಸುಮಾರು 20 ಅಡಿ ದೂರದಿಂದ ಉಪಕುಲಪತಿಯತ್ತ ಎಸೆದ ಒಂದು ಪೇಪರ್‌ವೇಟ್‌ ಉಪಕುಲಪತಿಗೆ ತಾಕದೆ, ಅವರ ಹಿಂದಿನ ಗೋಡೆಗೆ ಬಿದ್ದು, ಸಿಬ್ಬಂದಿ ವರ್ಗದ ಮಹಿಳೆಯ ಮೇಲೆ ಬಿತ್ತೆಂದು ವರದಿಯಾಗಿದೆ. ಪೇಪರ್‌ವೇಟ್‌ ಬಿದ್ದ ಜಾಗದಲ್ಲಿ ಗೋಡೆಯಲ್ಲಿ ಅಷ್ಟು ಹಳ್ಳವಾಗಿದೆ ಎಂದು ವರದಿಗಾರರಿಗೆ ಆ ಜಾಗ ತೋರಿಸಲಾಯಿತು.

ಭಾರತದ ವಿದೇಶಾಂಗ ನೀತಿ ಪುನರ್ವಿಮರ್ಶೆಗೆ ಅಹ್ಮದ್‌ ಕರೆ

ನವದೆಹಲಿ, ಸೆ. 29: ರಬಾತ್‌ ಇಸ್ಲಾಂ ಸಮ್ಮೇಳನದಿಂದ ಭಾರತವನ್ನು ಹೊರದೂಡಿದ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ನೀತಿಯ ಪುನರ್ವಿಮರ್ಶೆ ಮಾಡಬೇಕೆಂದು ಕೇಂದ್ರ ಕೈಗಾರಿಕೆ ಮತ್ತು ಕಂಪನಿ ವ್ಯವಹಾರಗಳ ಸಚಿವ ಫಕ್ರುದ್ದೀನ್‌ ಆಲಿ ಅಹಮದ್‌ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.