
ಅಹ್ಮದಾಬಾದ್, ಜ. 26 (ಯುಎನ್‌ಐ, ಪಿಟಿಐ)– ಕಳೆದ 200 ವರ್ಷಗಳಲ್ಲಿಯೇ ಅತ್ಯಂತ ಭೀಕರ ಎನ್ನಲಾದ ಭೂಕಂಪದಲ್ಲಿ ಗುಜರಾತ್ ರಾಜ್ಯವೊಂದರಲ್ಲೇ 1,200 ಮಂದಿ ಮೃತಪಟ್ಟಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಚೆನ್ನೈ, ಕಲ್ಕತ್ತಾ, ಮುಂಬೈ, ದೆಹಲಿ ಮುಂತಾದ ದೇಶದ ಇತರ ಭಾಗಗಳಿಂದಲೂ ಭೂಕಂಪ ಸಂಭವಿಸಿದ ವರದಿಗಳು ಬಂದಿದ್ದರೂ ಗುಜರಾತ್ ಎಲ್ಲಕ್ಕಿಂತ ಹೆಚ್ಚು ಹಾನಿಯನ್ನು ಅನುಭವಿಸಿದೆ. ಸಾವುನೋವುಗಳ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಟಿ. ನರಸೀಪುರ, ಜ. 26– ಕಾವೇರಿ ನದಿಯಲ್ಲಿ ಈಜಲು ಹೋದ ಬೆಂಗಳೂರಿನ 6 ಮಂದಿ ಯುವ ಪ್ರವಾಸಿಗರು ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ದಾರುಣ ಘಟನೆ ತಾಲ್ಲೂಕಿನ ತಲಕಾಡು ಬಳಿ ಇಂದು ಮಧ್ಯಾಹ್ನ ನಡೆದಿದೆ.
ಗುರುಪ್ರಸಾದ್ (24), ಗೋಪಿನಾಥ (24), ನಾಗೇಂದ್ರ (25), ರವಿಕುಮಾರ್ (24), ಮಹೇಶ್ (24) ಹಾಗೂ ಮಂಜುನಾಥ್ (24) ಎಂಬುವರೇ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಚೆನ್ನೈ, ಜ. 26 (ಪಿಟಿಐ)– ‘ನನ್ನ ತಂದೆಯ ಮೀಸೆ ವೀರಪ್ಪನ್‌ಗೆ ಇರೋದಕ್ಕಿಂತ ತುಂಬ ದೊಡ್ಡದಾಗಿತ್ತು. ವೀರಪ್ಪನ್‌ನನ್ನು ಹತ್ತಿರದಿಂದ ನೋಡುವ ಕುತೂಹಲ ನನಗಿತ್ತು’.
ನಟ ಡಾ. ರಾಜ್‌ಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಭೇಟಿ ಮಾಡಲು ಚೆನ್ನೈಗೆ ಹೋದಾಗ ವೀರಪ್ಪನ್ ಕುರಿತು ಹೀಗೆ ತಮಾಷೆಯಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.