ADVERTISEMENT

ಭಾನುವಾರ, 15–2–1970

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:45 IST
Last Updated 14 ಫೆಬ್ರುವರಿ 2020, 19:45 IST

ಬೆಳಗಾವಿಯಲ್ಲಿ ಮರಾಠಿಗರ ಹಿಂಸಾಚಾರ: ಆದರೂ ಎಸ್ಸೆನ್‌ ಮತ್ತಿತರ ನಾಯಕರಿಗೆ ಭವ್ಯ ಸ್ವಾಗತ

ಬೆಳಗಾವಿ, ಫೆ. 14: ಕಾಂಗ್ರೆಸ್‌ ಅಧ್ಯಕ್ಷ ನಿಜಲಿಂಗಪ್ಪ ಅವರ ವಿರುದ್ಧ ಇಂದು ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಕಪ್ಪುಧ್ವಜ ಪ್ರದರ್ಶನ ಹಿಂಸಾರೂಪ ತಳೆದಾಗ, ಕಲ್ಲೆಸೆತ ಮತ್ತು ಪೊಲೀಸರ ಲಾಠಿ ಪ್ರಹಾರದಿಂದ ಕೆಲವರು ಗಾಯಗೊಂಡರು.

ಈಚಿನ ದಶಕಗಳಲ್ಲಿ ಈ ಊರು ಕಂಡರಿಯದಂತಹ ಎರಡು ಮೈಲಿ ಉದ್ದದ ಭಾರಿ ಮೆರವಣಿಗೆ ಖಡೇಬಜಾರ ಮತ್ತು ರಾಮದೇವಗಲ್ಲಿ ಸಂಧಿಸುವ ಚೌಕದ ಮೂಲಕ ಹಾದು ಹೋಗುತ್ತಿದ್ದಾಗ, ಮೆರವಣಿಗೆಯ ಮೇಲೆ ಕಲ್ಲಿನ ಸುರಿಮಳೆಯಾಗಿ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಹಲವು ಬಾರಿ ಲಾಠಿ ಪ್ರಹಾರ ಮಾಡಿದರು.

ADVERTISEMENT

ಸಾರ್ವಜನಿಕರಲ್ಲಿ ನಾಲ್ಕು ಮಂದಿ, ಪೊಲೀಸರ ಪೈಕಿ 18 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

ಬಡತನವೇ ಭಾಗ್ಯ!

ಹರಿಹರ, ಫೆ. 14: ಆಡಳಿತ ಕಾಂಗ್ರೆಸ್‌ ಅಧ್ಯಕ್ಷ ಜಗಜೀವನರಾಂ ಅವರು ಇಂಗ್ಲಿಷ್‌ನಲ್ಲಿ ಪ್ರಥಮ ವಾಕ್ಯ ಮುಗಿಸಿ ಎಚ್‌. ಸಿದ್ಧವೀರಪ್ಪ ಅವರು ಅದರ ಕನ್ನಡ ಅನುವಾದ ಮುಗಿಸುತ್ತಿದ್ದಂತೆಯೇ ‘ಹಿಂದಿ ಹಿಂದಿ’ ಎಂಬ ಕೂಗುಗಳು ಕಿಕ್ಕಿರಿದ ಶೋಭಾ ಚಲನಚಿತ್ರ ಮಂದಿರದಲ್ಲಿ ಕೇಳಿಬಂದವು.

ಜಗಜೀವನರಾಂ ಅವರು ನಕ್ಕು, ಮೊದಲು ಹಿಂದಿ ಆನಂತರ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು.

ಆಗಾಗ್ಗೆ ಕರತಾಡನದ ಸ್ವಾಗತ ಪಡೆದ ರಾಂ ಅವರು ‘ನಮ್ಮದು ಬಡ ದೇಶ’ ಎಂದು ಆರಂಭಿಸಿದಾಗ ಭಾರಿ ಕರತಾಡನವಾಯಿತು.

‘ಬಡತನದಲ್ಲಿ ಸಂತೋಷದಿಂದ ಇರುವುದು ಒಂದು ಒಳ್ಳೆ ಗುಣ. ಇದನ್ನು ಹರಿಹರದಲ್ಲಿ ಬಹು ಪ್ರಮಾಣದಲ್ಲಿ ಕಾಣುತ್ತಿದ್ದೇನೆ’ ಎಂದು ಹೇಳಿದಾಗ ಕರತಾಡನ ಮತ್ತೂ ದೀರ್ಘವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.