75 ವರ್ಷಗಳ ಹಿಂದೆ
ಬೆಂಗಳೂರು, ಜುಲೈ 10– ‘ಮೈಸೂರು ಸರ್ಕಾರ ಸಾಲ ಎತ್ತಬೇಕೇ..? ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಅವಶ್ಯಬಿದ್ದಲ್ಲಿ ಸಾಲ ಎತ್ತಲಾಗುವುದು. ಆದರೆ, ಸಂಭವ ಕಡಿಮೆ’ ಎಂದು ಇನ್‌ಛಾರ್ಜ್ ಮುಖ್ಯಮಂತ್ರಿ ಹೆಚ್.ಸಿ.ದಾಸಪ್ಪನವರು ಇಂದು ಸಂಜೆ ಅವರ ಛೇಂಬರ್ಸ್‌ನಲ್ಲಿ ಪತ್ರಿಕಾ ಪ್ರತಿನಿಧಿಗಳು ಭೇಟಿ ಮಾಡಿದಾಗ ತಿಳಿಸಿದರು.
ಮದರಾಸ್, ಜುಲೈ 10– ಮದರಾಸು ಸಂಸ್ಥಾನದಲ್ಲಿ ಕಾಲೇಜುಗಳಿಗೆ ಪ್ರವೇಶವನ್ನು ಮಿತಿಗೊಳಿಸುವ ಕೋಮುವಾರು ಆಜ್ಞೆಯು ಶಾಸನ ಬಾಹಿರವಲ್ಲವೆಂದೂ, ಅದು ಯಾವ ರೀತಿಯಲ್ಲೂ ಭಾರತ ರಾಜ್ಯಾಂಗದ ನಿಯಮಾವಳಿಯನ್ನು ಉಲ್ಲಂಘಿಸುವುದಿಲ್ಲವೆಂದೂ ಮದರಾಸ್ ಸರ್ಕಾರದವರು ಇಂದು ಪ್ರತಿಪಾದಿಸಿದರು.
ಚೀಪ್ ಜಸ್ಟೀಸ್ ಮತ್ತು ಜಸ್ಟೀಸ್ ಸೋಮಸುಂದರಂರವರ ಮುಂದೆ ಅಡ್ವೋಕೇಟ್ ಜನರಲ್ ಅವರು ಅರ್ಜಿಯೊಂದನ್ನು ಇಂದು ಸಲ್ಲಿಸಿ, ಸರ್ಕಾರದ ಕೋಮುವಾರು ಆಜ್ಞೆಯ ನ್ಯಾಯಬದ್ಧತೆಯನ್ನು ಪ್ರಶ್ನಿಸುವ ಕಾಲೇಜು ಪ್ರವೇಶಾಪೇಕ್ಷಿಗಳಾದ ವಿದ್ಯಾರ್ಥಿಯೊಬ್ಬರ ಮ್ಯಾಂಡಮಸ್ ಅರ್ಜಿಯನ್ನು ವಿರೋಧಿಸಿದರು.
ಕಾಲೇಜು ಪ್ರವೇಶದ ಬಗ್ಗೆ ಸರ್ಕಾರದ ಕೋಮುವಾರು ಆಜ್ಞೆ ನ್ಯಾಯಬಾಹಿರವಲ್ಲವೆಂದೂ, ಈಗಿನ ಆಜ್ಞೆಯು ಪ್ರದೇಶಗಳ ಜನಸಂಖ್ಯೆ, ಸಾಕ್ಷರತೆ, ಆರ್ಥಿಕ ಪರಿಸ್ಥಿತಿಗಳನ್ನು ಗಣನೆಗೆ ತಂದುಕೊಂಡು, ಜನತೆಯ ದುರ್ಬಲ ಹಾಗೂ ಹಿಂದುಳಿದ ವಿಭಾಗಗಳ ಆರ್ಥಿಕ ಹಿತಕ್ಕೆ ರಾಜ್ಯಾಂಗದಲ್ಲಿ ಅವಕಾಶ ದಕ್ಕಿರುವುದಕ್ಕೆ ಅನುಸಾರವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.