ADVERTISEMENT

25 ವರ್ಷಗಳ ಹಿಂದೆ | ಎಚ್‌.ಡಿ.ದೇವೇಗೌಡ ಮುಖ್ಯಮಂತ್ರಿ, ಜೆ.ಎಚ್.ಪಟೇಲ್ ಡಿಸಿಎಂ

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ 11–12–1994

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 1:29 IST
Last Updated 12 ಡಿಸೆಂಬರ್ 2019, 1:29 IST
   

ಬೆಂಗಳೂರು, ಡಿ. 11– ರಾಜಭವನದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಮಹಾಪೂರದ ನಡುವೆ ಪ್ರದೇಶ ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ರಾಜ್ಯದ ಹದಿನಾಲ್ಕನೆಯ ಮುಖ್ಯಮಂತ್ರಿಯಾಗಿ, ಪಕ್ಷದ ಸಂಸದೀಯ ಮಂಡಲಿ ಅಧ್ಯಕ್ಷ ಜೆ.ಎಚ್. ಪಟೇಲ್ ಅವರು ಉಪ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರು ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದರು.

ಸತ್ಯ–ನಿಷ್ಠೆಯಿಂದ, ಪಕ್ಷಪಾತ, ರಾಗದ್ವೇಷಗಳಿಲ್ಲದೆ ಕಾರ್ಯ ನಿರ್ವಹಿಸುವುದಾಗಿ ಇಬ್ಬರೂ ನಾಯಕರು ಭಗವಂತನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಿದರು.

ADVERTISEMENT

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಧಾನಸೌಧಕ್ಕೆ ಮುತ್ತಿಗೆ– ಅಭಿಮಾನಿಗಳ ದಾಂದಲೆ– ವಿಳಂಬಕ್ಕೆ ಅಸಹನೆ

ಬೆಂಗಳೂರು, ಡಿ. 11– ನೂತನ ಮುಖ್ಯಮಂತ್ರಿ ಆಯ್ಕೆಯಲ್ಲಿ ಆದ ವಿಳಂಬದಿಂದ ಕುಪಿತರಾದ ದೇವೇಗೌಡರ ಅಭಿಮಾನಿಗಳು ಇಂದು ಪಕ್ಷದ ಕಚೇರಿ, ವಿಧಾನಸೌಧ ಮತ್ತು ರಾಜಭವನಕ್ಕೆ ಮುತ್ತಿಗೆ ಹಾಕಿ, ಹಿಂಸಾಕೃತ್ಯಗಳಲ್ಲಿ ತೊಡಗಿ ಉದ್ರಿಕ್ತ ಪರಿಸ್ಥಿತಿಯನ್ನು ಸೃಷ್ಟಿಸಿದರು.

ದೇವೇಗೌಡರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಪ‍ಟ್ಟು ಹಿಡಿದ ಅಭಿಮಾನಿಗಳು ಭಾವುಕರಾಗಿ ನಡೆಸಿದ ದಾಂದಲೆ ಹಿಂಸಾ ಸ್ವರೂಪ ನಡೆಯಿತು. ಒಳಗೆ ಹೋದ ಶಾಸಕರನ್ನು‍ಪಕ್ಷದ ಕಚೇರಿಯಲ್ಲಿ ಕೂಡಿಹಾಕಲಾಗಿತ್ತು. ಮಿತಿ ಮೀರಿದ ಉತ್ಸಾಹದಲ್ಲಿ ಕೆಲವರು ವಿಧಾನಸೌಧದ ತುತ್ತ ತುದಿಗೇರಿದರು. ಕೈಯಲ್ಲಿ ಪಕ್ಷದ ಬಾವುಟ ಹಿಡಿದಿದ್ದ ಅವರನ್ನು ಪೊಲೀಸರು ಬೆನ್ನಟ್ಟಿ ಕೆಳಗಿಳಿಸಿದರು.

ನಾಯಕತ್ವದ ಪ್ರಶ್ನೆ ಸಂಜೆಯ ಹೊತ್ತಿಗೆ ಈಡೇರಿದರೂ ರಾಜಭವನದ ಹುಲ್ಲುಹಾಸಿನ ಮೇಲೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಾಸಕರು, ಹಿರಿಯ ಮುಖಂಡರು ಹಾಗೂ ದೇವೇಗೌಡರ ಕುಟುಂಬ ವರ್ಗದವರೂ ಒಳಗೆ ಹೋಗಲು ಆಗಲಿಲ್ಲ.

ಇಂದು ಎನ್‌.ಟಿ.ಆರ್. ಪ್ರಮಾಣ ವಚನ

ಹೈದರಾಬಾದ್, ಡಿ. 11– (ಪಿಟಿಐ, ಯುಎನ್‌ಐ)– ತೆಲುಗು ದೇಶಂ ನಾಯಕ ಎನ್‌.ಟಿ. ರಾಮರಾವ್ ಅವರು ಇಂದು ದೇಶಂ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಇದರೊಂದಿಗೆ ಮೂರನೇ ಭಾರಿ ಅವರು ಆಂಧ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಭೂಮಿಕೆ ಸಿದ್ಧವಾಗಿದೆ.

ರಾಮರಾವ್ ಅವರು ನಾಳೆ ಮಧ್ಯಾಹ್ನ ಶುಭ ಮುಹೂ‌ರ್ತ 12.01 ಗಂಟೆಗೆ ಲಾಲ್‌ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಅಪಾರ ಜನರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುವರು. 1983ರ ಚುನಾವಣೆಯಲ್ಲಿ ಅವರ ಪಕ್ಷ 202 ಸ್ಥಾನಗಳನ್ನು ಗಳಿಸಿ ಜಯಭೇರಿ ಬಾರಿಸಿದಾಗಲೂ ಎನ್.ಟಿ.ಆರ್. ಇದೇ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.