ADVERTISEMENT

50 ವರ್ಷಗಳ ಹಿಂದೆ: ಬುಧವಾರ, ಆಗಸ್ಟ್‌ 26, 1970

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 15:57 IST
Last Updated 25 ಆಗಸ್ಟ್ 2020, 15:57 IST
   

ಪ್ರತ್ಯೇಕತಾ ಧೋರಣೆಗೆ ಕೇಂದ್ರದ ಪ್ರೋತ್ಸಾಹ ಇಲ್ಲ: ಪ್ರಧಾನಿ ಸ್ಪಷ್ಟನೆ

ನವದೆಹಲಿ, ಆ.25– ಜಾತಿ, ಮತ, ಭಾಷೆ ಮತ್ತು ರಾಜ್ಯಗಳ ಆಧಾರದ ಮೇಲೆ ಯಾವುದೇ ಬಗೆಯ ಪ್ರತ್ಯೇಕತಾ ಮನೋಭಾವವನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾಜ್ಯಸಭೆಯಲ್ಲಿ ಖಂಡತುಂಡವಾಗಿ ಸ್ಪಷ್ಟಪಡಿಸಿದರು.

ತಮಿಳುನಾಡು ಸರ್ಕಾರವು ಪ್ರತ್ಯೇಕ ಧ್ವಜವನ್ನು ಬೇಡುತ್ತಿರುವುದು ಅದರ ಪ್ರತ್ಯೇಕತಾ ಧೋರಣೆಗೆ ಸಾಕ್ಷಿಯಾಗಿದೆ ಎಂದು ಎಚ್ಚರಿಸಿದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ADVERTISEMENT

ಭಾಯಿ ಮಹಾವೀರ್‌ (ಜನಸಂಘ) ಮತ್ತಿತರರ ಗಮನ ಸೆಳೆಯುವ ಸೂಚನೆ ಮೂಲಕ ಈ ವಿಷಯ ಪ್ರಸ್ತಾಪಕ್ಕೆ ಬಂದಿತು.‌

ಗಡಿ ವಿವಾದ ಸುಪ್ರೀಂ ಕೋರ್ಟ್‌ಗೆ ಹೋಗದು

ನವದೆಹಲಿ, ಆ.25– ಮೈಸೂರು– ಮಹಾರಾಷ್ಟ್ರ ಗಡಿ ವಿವಾದವನ್ನು ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಒಪ್ಪಿಸುವ ಯೋಚನೆ ಕೇಂದ್ರ ಸರ್ಕಾರಕ್ಕಿಲ್ಲ.

ಕೆಲವು ದಿನಗಳಹಿಂದೆ, ವಿವಾದವನ್ನು ಸುಪ್ರೀಂ ಕೋರ್ಟ್‌ಗೆ ಒಪ್ಪಿಸುವಂತೆ ಕೇಂದ್ರ ಸಚಿವರೊಬ್ಬರು ಅಸ್ಪಷ್ಟ ಸಲಹೆ ನೀಡಿದ್ದರು. ಆದರೆ, ವಿವಾದವನ್ನು ಸುಪ್ರೀಂ ಕೋರ್ಟ್‌ಗೆ ಒಪ್ಪಿಸುವ ಬಗ್ಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದು ಸರ್ಕಾರದಲ್ಲಿ ಬಹುಮತಾಭಿಪ್ರಾಯ ವ್ಯಕ್ತಪಟ್ಟಿತ್ತು. ಅಲ್ಲದೆ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಬೇಕಾದ, ಕಾನೂನಿಗೆ ಸಂಬಂಧಿಸಿದ ಯಾವ ಅಂಶವೂ ವಿವಾದದಲ್ಲಿಲ್ಲ ಎಂದೂ ಅಭಿಪ್ರಾಯ ಪಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.