ADVERTISEMENT

ಶುಕ್ರವಾರ, 29–7–1994

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 20:00 IST
Last Updated 28 ಜುಲೈ 2019, 20:00 IST
   

ವಿಜಯನಗರ ಉಕ್ಕು ಕಾರ್ಖಾನೆಗೆ ಭೂಮಿಪೂಜೆ

ಬಳ್ಳಾರಿ, ಜುಲೈ 28– ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಜಯನಗರ ಉಕ್ಕು ಕಾರ್ಖಾನೆಗೆ ಬುಧವಾರ ಭೂಮಿಪೂಜೆ ನೆರವೇರುವುದರೊಂದಿಗೆ ಕಾರ್ಖಾನೆ ಆರಂಭವಾಗುವುದೋ ಇಲ್ಲವೋ ಶಂಕೆ ಕೊನೆಗೊಂಡಿತು.

ಉಕ್ಕು ಕಾರ್ಖಾನೆ ಜಿಂದಾಲ್ ಉಕ್ಕು ಸಂಸ್ಥೆ ಮತ್ತು ರಾಜ್ಯ ಸರ್ಕಾರದ ಜಂಟಿ ಮಾಲಿಕತ್ವದಲ್ಲಿ ಆರಂಭವಾಗಲಿದ್ದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೆಶಕ ಸಜ್ಜನ್ ಕೆ. ಜಿಂದಾಲ್ ಅವರ ಪತ್ನಿ ಭೂಮಿಪೂಜೆ ನೆರವೇರಿಸಿದರು.

ADVERTISEMENT

ಕಾರ್ಖಾನೆ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದ್ದು ಮುಂದಿನ 42 ತಿಂಗಳುಗಳಲ್ಲಿ ಉತ್ಪಾದನೆ ಆರಂಭವಾಗಲಿದೆ ಎಂದು ಸಜ್ಜನ್ ಜಿಂದಾಲ್ ಅವರು ಸುದ್ದಿಗಾರರೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಾ ತಿಳಿಸಿದರು.

ಮೀಸಲಾತಿ ಏರಿಕೆ ಪ್ರಶ್ನಿಸಿ ರಿಟ್

ಬೆಂಗಳೂರು, ಜುಲೈ 28– ವೃತ್ತಿಪರ ಕಾಲೇಜುಗಳ ಪ್ರವೇಶ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಸರ್ಕಾರ ಕಳೆದ ಏಪ್ರಿಲ್ 20 ರಂದು ಹಾಗೂ ಈ ಪ್ರಮಾಣ ಹೆಚ್ಚಿಸಿ ಜುಲೈ 25 ರಂದು ಹೊರಡಿಸಿರುವ ಆಜ್ಞೆಗಳ ಕ್ರಮಬದ್ಧತೆ ಪ್ರಶ್ನಿಸಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ವಿಚಾರಣೆ ಕಾಲದಲ್ಲಿ ಶೇ 50 ಕ್ಕಿಂತ ಹೆಚ್ಚಿನ ಭಾಗದ ಮೀಸಲಾತಿ ಜಾರಿಗೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣರ ಮಹಾಸಭಾ ಪರವಾಗಿ ಅದರ ಅಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ ಮತ್ತು ಇತರ 11 ಮಂದಿ ರಿಟ್‌ ಅರ್ಜಿ ಸಲ್ಲಿಸಿದ್ದು, ಚಿನ್ನಪ್ಪರೆಡ್ಡಿ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ಕೊಡುವಂತೆ ಆದೇಶಿಸಬೇಕೆಂದು ಕೇಳಿಕೊಂಡಿದ್ದಾರೆ.

ಮ್ಯಾಗ್ಸೇಸೆ ಪ್ರಶಸ್ತಿ

ಮನಿಲ, ಜುಲೈ 28 (ಎಪಿ)– ಜಪಾನ್‌ನಲ್ಲಿರುವ ಅರ್ಜೆಂಟಿನ ಮೂಲದ ಕ್ರೈಸ್ತ ಗುರು ಜೆ. ಎಡ್ವರ್ಡೋ ಜಾರ್ಜ್ ಆಂಜೆನೀರೆನ್ ಅವರಿಗೆ ಅಂತರರಾಷ್ಟ್ರೀಯ ಅರಿವಿಗಾಗಿ ಇರುವ 1994ರ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.