ADVERTISEMENT

ಸೋಮವಾರ 20–1–1969

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST

ತೆಲಂಗಾಣ ಹಿತರಕ್ಷಣೆ: ಎಲ್ಲ ಪಕ್ಷಗಳ ನಡುವೆ ಒಪ್ಪಂದ

ಹೈದರಾಬಾದ್‌.ಜ.19– ತೆಲಂಗಾಣ ‘ಹಿತ ರಕ್ಷಣೆ’ಯ ಸೂಕ್ತ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಶಾಸನ ಸಭೆಯಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಸರ್ವಾನುಮತದ ಒಪ್ಪಿಗೆಗೆ ಬಂದಿದ್ದಾರೆಂದು ಮುಖ್ಯಮಂತ್ರಿ ಬ್ರಹ್ಮಾನಂದ ರೆಡ್ಡಿ ಇಂದು ಪ್ರಕಟಿಸಿದರು.

ಆಂಧ್ರದ ರಾಜ್ಯ ಪುನರ್ರಚನೆ ಕಾಲದಲ್ಲಿ ಎರಡು ಪ್ರದೇಶಗಳ ನಾಯಕರ ನಡುವೆ ಆದ ‘ಸನ್ಮಾನ್ಯರ ಒಪ್ಪಂದ’ ಒಂದು ಭಾಗ ‘ಹಿತ ರಕ್ಷಣೆ’.

ADVERTISEMENT

ಸರ್ವ ಪಕ್ಷಗಳ ಒಪ್ಪಂದದ ದೃಷ್ಟಿಯಿಂದ ವಿದ್ಯಾರ್ಥಿಗಳು ಮುಷ್ಕರವನ್ನು ನಿಲ್ಲಿಸಬೇಕೆಂದು ಶ್ರೀ ರೆಡ್ಡಿ ಕರೆಕೊಟ್ಟರು.

ನಿಕ್ಸನ್‌: ಇಂದು ಅಧಿಕಾರ ಸ್ವೀಕಾರ

ನ್ಯೂಯಾರ್ಕ್‌.ಜ.20– ರಿಚರ್ಡ್‌ ನಿಕ್ಸನ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಸೂತ್ರಗಳನ್ನು ಹಿಡಿಯುತ್ತಾರೆ.

ಕ್ಯಾಪಿಟಲ್‌ ಹಿಲ್ ಮೇಲೆ ನಡೆಯುವ ಸರಳ ಸಮಾರಂಭದಲ್ಲಿ ಮನೆತನದ ಎರಡು ಹಳೆಯ ಬೈಬಲ್‌ಗಳ ಮೇಲೆ ಇವರ ಪ್ರಮಾಣವಚನ.

ಭಾರತದ ಜೊತೆ ಸೇರ್ಪಡೆ ಅಂತಿಮ: ಕಾಶ್ಮೀರದ ಎಲ್ಲ ಪಕ್ಷಗಳ ಸ್ವಷ್ಟ ಅಭಿಪ್ರಾಯ

ಜಮ್ಮು.ಜ.19– ಭಾರತದ ಜೊತೆ ಕಾಶ್ಮೀರದ ಸೇರ್ಪಡೆ ಅಂತಿಮ ಹಾಗೂ ರದ್ದುಗೊಳಿಸಲಾಗದಂತಹ ನಿರ್ಧಾರವೆಂದು ತಮ್ಮ ಮುಂದೆ ಸಾಕ್ಷ್ಯ ನುಡಿದ ಎಲ್ಲ ಪಕ್ಷಗಳೂ ಅತ್ಯಂತ ಸ್ವಷ್ಟವಾಗಿ ತಿಳಿಸಿವೆಯೆಂದು ಗಜೇಂದ್ರ ಗಡ್ಕರ್‌ ತನಿಖಾ ಆಯೋಗ ವರದಿ ಮಾಡಿದೆ.

ಆದರೆ ಕೆಲವು ಜನರು ರಾಜ್ಯದಲ್ಲಿ ನಡೆಸುತ್ತಿರುವ ಪ್ರಚಾರವನ್ನು ಉಪೇಕ್ಷಿಸಲು ಸಾಧ್ಯವಿಲ್ಲವೆಂದೂ, ಈ ಪ್ರಚಾರಗಳಿಂದಾಗಿ ಕಾಶ್ಮೀರದ ಜನರಲ್ಲಿ ರಾಜಕೀಯ ಅನಿಶ್ಚಯದ ಭಾವನೆಯುಂಟಾಗುವುದೆಂದೂ ಉದ್ವೇಗ,ಪ್ರಚೋದನೆಗಳಿಗೆ ಅದೇ ಕಾರಣವೆಂದೂ ಆಯೋಗವು ಅಭಿಪ್ರಾಯಪಟ್ಟಿದೆ.

ನಗರದಲ್ಲೂ ಟೆಲಿವಿಷನ್‌ ಕೇಂದ್ರ

ನವದೆಹಲಿ.ಜ.19– ನಾಲ್ಕನೆ ಯೋಜನೆ ಅವಧಿಯಲ್ಲಿ ಇನ್ನೂ ಆರು ಟೆಲಿವಿಷನ್ ಕೇಂದ್ರಗಳನ್ನು ಆರಂಭಿಸಲು ಆಲೋಚಿಸಲಾಗಿದೆ. ಇದಕ್ಕಾಗಿ ಆಯ್ಕೆಯಾಗಿರುವ ಸ್ಥಳಗಳು ಬೆಂಗಳೂರು, ಮದರಾಸು, ಕಾನ್ಪುರ, ಅಹಮದಾಬಾದ್‌, ಕಲ್ಕತ್ತ, ಮುಂಬೈ –ಪಿಟಿಐ

37 ಜನರಿದ್ದ ವಿಮಾನ ಷಾರ್ಕ್‌ಗಳಿಂದ ತುಂಬಿದ ಸಾಗರಕ್ಕೆ ಪತನ

ಲಾಸ್‌ ಎಂಜಲಿಸ್‌.ಜ.19– ಶನಿವಾರ ರಾತ್ರಿ ಹೊರಟ ಕೂಡಲೇ ಯುನೈಟಿಡ್‌ ಏರ್‌ಲೈನ್ಸ್‌ ಸಂಸ್ಥೆಯ ಬೋಯಿಂಗ್‌–727 ವಿಮಾನವೊಂದು (ಇದ್ದ ಪ್ರಯಾಣಿಕರ ಸಂಖ್ಯೆ:37) ಅಪಾಯಕಾರಿ ಷಾಕ್‌ ಮೀನುಗಳಿಂದ ತುಂಬಿದ ಪೆಸಿಫಿಕ್‌ ಸಾಗರಕ್ಕೆ ಬಿದ್ದಿತ್ತು.

ಪ್ರಯಾಣಿಕರಲ್ಲಿ ಯಾರೂ ಬದುಕಿರುವ ಸಂಭವವಿಲ್ಲವೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.