
ನವದೆಹಲಿ, ಅ. 24 (ಯುಎನ್‌ಐ)– ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಅಸ್ವಸ್ಥಗೊಂಡು ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಸಚಿವ ಸೀತಾರಾಂ ಕೇಸರಿ ಇಂದು ರಾತ್ರಿ ನಿಧನರಾದರು.
ಉಸಿರಾಟದ ತೊಂದರೆಯಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಕಳೆದ ಕೆಲವು ದಿನಗಳಿಂದ ಇರಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದು, ಇಂದು ರಾತ್ರಿ ಉಸಿರಾಟ ನಿಂತು ಕೊನೆಯುಸಿರೆಳೆದರು. ಕೇಸರಿ ಅವರಿಗೆ 81 ವರ್ಷವಾಗಿತ್ತು.
ಪಣಜಿ, ಅ. 24– ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಗೋವಾದ ಮೊಟ್ಟ ಮೊದಲ ಬಿಜೆಪಿ ನೇತೃತ್ವದ 14 ಮಂದಿ ಸಚಿವ ಸಂಪುಟದ ಸಮ್ಮಿಶ್ರ ಸರ್ಕಾರ ಇಂದು ಅಧಿಕಾರಕ್ಕೆ ಬಂದಿತು.
ಬಿಜೆಪಿ ಶಾಸಕಾಂಗ ಪಕ್ಷದ ಮುಖಂಡ ಮನೋಹರ್ ಪರಿಕ್ಕರ್ ಅವರಿಗೆ ರಾಜ್ಯಪಾಲ ಮೊಹಮ್ಮದ್ ಫಜಲ್ ಅವರು, ಇಂದು ಸಂಜೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.