ನವದೆಹಲಿ, ಮೇ 28– ಕೃಷಿ ಸಂಶೋಧನೆಯ ಉದ್ದೇಶಗಳನ್ನು ಸಾಧಿಸಲು ಕಾರ್ಯನಿರತ ರೈತರೊಡನೆ ಸತತ ಸಮಾಲೋಚನೆ ನಡೆಸುತ್ತಿರಬೇಕೆಂದು ಕೃಷಿ ಮತ್ತು ನೀರಾವರಿ ಸಚಿವ ಜಗಜೀವನರಾಂ ಅವರು ಇಂದು ಕೃಷಿ ವಿಜ್ಞಾನಿಗಳಿಗೆ ತಿಳಿಸಿದರು.
ಅನೇಕ ಶತಮಾನಗಳಿಂದ ರೈತರು ಅನುಸರಿಸಿಕೊಂಡು ಬರುತ್ತಿರುವ ಪ್ರಾಚೀನ ಕೃಷಿ ಪದ್ಧತಿಗಳನ್ನೂ ಅವುಗಳಿಗೆ ಕಾರಣವನ್ನೂ ಸಾಕಷ್ಟು ಸರಿಯಾಗಿ ಅರಿತುಕೊಳ್ಳದೆ ಅವುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ‘ಬದಲಾವಣೆ ಮಾಡುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಲಾರೆವು’ ಎಂದರು.
ಚಿಕ್ಕಮಗಳೂರು, ಮೇ 28– ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತಿತರ ಕೆಡುಕುಗಳನ್ನು ನಿರ್ಮೂಲ ಮಾಡಲು ಸ್ವಾತಂತ್ರ್ಯ ಯೋಧರು ನೆರವಾಗಬೇಕೆಂದು ಸಂಸತ್ ಸದಸ್ಯ ಕೆಂಗಲ್ ಹನುಮಂತಯ್ಯ ಅವರು ಕರೆಯಿತ್ತರು.
ಶ್ರೀಯುತರು ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಸ್ವರಾಜ್ಯ ಗಳಿಸಲು ಹೋರಾಡಿದಂತೆಯೇ ಕೆಡುಕುರಹಿತ ‘ಸುರಾಜ್ಯ’ ಸ್ಥಾಪನೆಗಾಗಿ ಹೋರಾಡಬೇಕೆಂದು ಮನವಿ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.