ಬೆಂಗಳೂರು, ಮೇ 29– ಕಾಳಿ ನದಿ ವಿದ್ಯುಚ್ಛಕ್ತಿ ಯೋಜನೆಗೆ ಹಣ ಪೂರೈಸುವ ವಿಷಯ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಪಿ.ಎನ್. ಹಕ್ಸರ್ ಅವರು ಇಲ್ಲಿ ತಿಳಿಸಿದರು.
ಕಾಳಿ ನದಿ ಯೋಜನೆಯನ್ನು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಯೋಜನೆ’ ಎಂದು ಪರಿಗಣಿಸುವುದೆಂದು ವರದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಮುಖ್ಯಮಂತ್ರಿ ದೇವರಾಜ ಅರಸು, ಅರ್ಥ ಸಚಿವ ಘೋರ್ಪಡೆಯವರೊಂದಿಗೆ ಇಂದು ಬೆಳಿಗ್ಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಹಕ್ಸರ್ ಅವರು, ರಾಜ್ಯದ ಆರ್ಥಿಕ ಸ್ಥಿತಿಯ ಇತಿಮಿತಿಗಳಲ್ಲಿ ರಾಜ್ಯವು ಅದನ್ನು ಪರಿಣಾಮ ಕಾರಿಯಾಗಿ ಕಾರ್ಯಗತ ಮಾಡುವುದು ಕಷ್ಟವೆಂಬುದನ್ನು ಒಪ್ಪಿಕೊಂಡರು.
ಹುಬ್ಬಳ್ಳಿ, ಮೇ 29– ಹುಬ್ಬಳ್ಳಿ–ಧಾರವಾಡ ಕಾರ್ಪೊರೇಷನ್ ಕಮಿಷನರ್ ಅವರು ಸೂಪರ್‌ಮಾರ್ಕೆಟ್, ಈಜುಕೊಳ, ರಾಯಪುರ ಜಲಾಶಯ ಮತ್ತು ‘ಹುಡ್‌ಕೊ’ ಯೋಜನೆ ಅಂಗವಾಗಿ ನಿರ್ಮಿಸಬೇಕೆಂದಿರುವ ಕಾಮಗಾರಿಗಳ ಸಂಬಂಧ ಕರೆದಿದ್ದ ಟೆಂಡರ್‌ಗಳಲ್ಲಿ ನಡೆದಿರುವುದೆಂದು ಹೇಳ ಲಾದ ಅಕ್ರಮ ವ್ಯವಹಾರಗಳ ಬಗ್ಗೆ, ರಾಜ್ಯ ಜಾಗೃತ ಆಯೋಗ ತನಿಖೆ ನಡೆಸಬೇಕೆಂಬ ನಿರ್ಣಯವನ್ನು ಇಂದು ಇಲ್ಲಿ ಸೇರಿದ್ದ ಕಾರ್ಪೊರೇಷನ್‌ನ ವಿಶೇಷ ತುರ್ತುಸಭೆ ಬಹುಮತದಿಂದ ಕೋಲಾಹಲ ಮತ್ತು ತೀವ್ರ ಗೊಂದಲದ ಸನ್ನಿವೇಶದಲ್ಲಿ ಅಂಗೀಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.