ADVERTISEMENT

50 ವರ್ಷಗಳ ಹಿಂದೆ: ಗುರುವಾರ 11–11–1971

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:30 IST
Last Updated 10 ನವೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾವೇರಿ ಯೋಜನೆ ಕಾರ್ಯ ಅತಿ ಶೀಘ್ರವೇ ಪೂರ್ಣ ಎಂದು ಧರ್ಮವೀರ

ಮೈಸೂರು, ನ. 10– ಮೈಸೂರು ರಾಜ್ಯವು ತನ್ನ ಕಾವೇರಿ ಯೋಜನಾ ಕಾರ್ಯಗಳನ್ನು ನಿಲ್ಲಿಸಬೇಕೆಂಬ ತಮಿಳುನಡು ಸರಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದರಿಂದ, ಆ ಯೋಜನಾ ಕಾರ್ಯಗಳನ್ನು ತ್ವರೆಗೊಳಿಸಿ ಆದಷ್ಟು ಶೀಘ್ರವೇ ಪೂರ್ಣ ಮಾಡಲಾಗುವುದು ಎಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಇಲ್ಲಿ ಹೇಳಿದರು.

ಮೈಸೂರು ದಸರಾ ವಸ್ತು ಪ್ರದರ್ಶನದ ಮುಕ್ತಾಯ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಶ್ರೀ ಧರ್ಮವೀರ ಅವರ, ‘ನಮ್ಮ ನೆರೆಹೊರೆಯವರ ಬಗ್ಗೆ ನಮಗೆ ಯಾವ ದುರುದ್ದೇಶವೂ ಇಲ್ಲ. ನಮ್ಮ ರಾಜ್ಯವೊಂದೇ ಸಂಪದ್ಭರಿತವಾಗಬೇಕೆಂಬ ಹಾಗೂ ಇನ್ನೊಂದು ರಾಜ್ಯ ನರಳಬೇಕೆಂಬುದು ನಮ್ಮ ಇಚ್ಛೆಯಲ್ಲ. ನಾವು ನಮ್ಮ ಪಾಲಿನ ನೀರನ್ನು ತೆಗೆದುಕೊಳ್ಳುತ್ತೇವೆ. ಅವರು ಅವರ ಪಾಲಿನ ನೀರನ್ನು ತೆಗೆದುಕೊಳ್ಳಲಿ. ಅವರಿಗೆ ಹಕ್ಕು ಇರುವಂತೆ ನಮಗೂ ಹಕ್ಕು ಇದೆ’ ಎಂದರು.

ADVERTISEMENT

‘ನಮ್ಮ ದೇಶದ ಯಾವ ಭಾಗವೂ ನೀರಾವರಿ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸಬೇಕೆಂಬುದು ನಮ್ಮ ಇಚ್ಛೆಯಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಕಾರ್ಮಿಕರ, ಉದ್ಯಮಿಗಳ ಬೆಂಬಲ

ನವದೆಹಲಿ, ನ. 10– ರಾಷ್ಟ್ರೀಯತುರ್ತು ಪರಿಸ್ಥಿತಿ ಸಂಭವಿಸಿದರೆ ಉತ್ಪಾದನೆ, ಸರಬರಾಜು ವ್ಯವಸ್ಥೆ ಮತ್ತು ಬೆಲೆಗಳ ಸ್ಥಿರತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ಕಾರ್ಮಿಕರ ಮತ್ತು ಉದ್ಯಮಿಗಳ ಪ್ರತಿನಿಧಿಗಳು ಇಂದು ವಾಗ್ದಾನ ಮಾಡಿದರು.

ಉದ್ಯಮಗಳನ್ನು ಕುರಿತ ಕೇಂದ್ರ ಸಲಹೆ ಮಂಡಳಿಯ 23ನೇ ವಾರ್ಷಿಕ ಸಭೆಯಲ್ಲಿ ಮಾಡಿದ ತಮ್ಮ ಪ್ರಾರಂಭ ಭಾಷಣದಲ್ಲಿ ಕೇಂದ್ರ ಕೈಗಾರಿಕೆ ಸಚಿವ ಶ್ರೀ ಮೋಯಿನ್ ಉಲ್‌ಹಕ್ ಚೌಧುರಿ ಅವರು ಮಾಡಿಕೊಂಡ ಮನವಿಗೆ ಉತ್ತರವಾಗಿ ಈ ಭರವಸೆ ಬಂದಿತು.

ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ತಮ್ಮ ಪೂರ್ಣ ಪಾತ್ರವನ್ನು ನಿರ್ವಹಿಸುವುದರಲ್ಲಿ ತಾವೆಂದಿಗೂ ಹಿಂದೆ ಬೀಳುವುದಿಲ್ಲವೆಂದು ತಮ್ಮ ತಮ್ಮ ಭಾಷಣಗಳಲ್ಲಿ ಭಾರತೀಯ ವಾಣಿಜ್ಯೋದ್ಯಮ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಎಸ್‌.ಎಸ್. ಕನೋರಿಯಾ, ಶ್ರೀ ಜೆ.ಆರ್.ಡಿ. ಟಾಟಾ ಮತ್ತು ಕಾರ್ಮಿಕ ನಾಯಕ ಶ್ರೀ ಜಿ. ರಾಮಾನುಜಂ ಅವರೂ, ಕೈಗಾರಿಕೆ ಕ್ಷೇತ್ರದ ಬಹುತೇಕ ಪ್ರತಿನಿಧಿಗಳೂ ಆಶ್ವಾಸನೆ ಇತ್ತರು.

ದಕ್ಷಿಣ ರೈಲ್ವೆಯ ಎಲ್ಲ ರೈಲುಗಳಿಗೂ ಡೀಸಲ್ ಎಂಜಿನ್

ಮಂಗಳೂರು, ನ. 10– ‘ದಕ್ಷಿಣ ರೈಲ್ವೆಯ ಎಲ್ಲ ರೈಲುಗಳಿಗೂ ಡೀಸಲ್ ಎಂಜಿನ್ ಹಾಕುವ ಯೋಜನೆ ಇದೆ. ಇದಕ್ಕೆ ರೈಲ್ವೆ ಮಂಡಳಿ ತತ್ವಶಃ ಒಪ್ಪಿದ್ದು ಆದಷ್ಟು ಬೇಗ ಎಂಜಿನ್ ಒದಗಿಸಲಾಗುವುದು’ ಎಂದು ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ಶ್ರೀ ಕೆ.ಎನ್. ಚನ್ನಬಸಪ್ಪ ಅವರು ತಿಳಿಸಿದರು.

ನಿನ್ನೆ ಇಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಿದ್ದ ಶ್ರೀ ಚನ್ನಬಸಪ್ಪ ಅವರು, ಮೈಕ್ರೊವೇವ್ ಸಂಪರ್ಕವನ್ನು ಮಂಗಳೂರಿಗೂ ವಿಸ್ತರಿಸಲು ನಿರ್ಧರಿಸಿದ್ದು, ಆದಷ್ಟು ಜಾಗ್ರತೆಯಾಗಿ ಈ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ಇತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.