ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ, 21–07–1997

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 14:41 IST
Last Updated 20 ಜುಲೈ 2022, 14:41 IST
   

ರಂಗಕ್ಕೆ ಆರ್‌ಜೆಡಿ: ಲಾಲೂಗೆ ಆರೋಪ ಮುಕ್ತಿ ಷರತ್ತು– ಡಿಎಂಕೆ ಸೂತ್ರ

ಚೆನ್ನೈ, ಜುಲೈ 20 (ಪಿಟಿಐ)– ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರು ಆರೋಪ ಮುಕ್ತರಾಗುವವರೆಗೆ ಅವರನ್ನು ಸಂಯುಕ್ತರಂಗದ ಹೊರಗಿಡಬೇಕು; ಅವರು ಆರೋಪ ಮುಕ್ತರಾದಲ್ಲಿ ರಾಷ್ಟ್ರೀಯ ಜನತಾ ದಳವನ್ನು (ಆರ್‌ಜೆಡಿ) ಸಂಯುಕ್ತರಂಗಕ್ಕೆ ಸೇರಿಸಿಕೊಳ್ಳಬಹುದು ಎಂಬ ಪರಿಹಾರ ಸೂತ್ರವನ್ನು ಡಿಎಂಕೆ ಮಂಡಿಸಿದೆ.

ಕಳೆದ ಗುರುವಾರ ನಡೆದ ಸಂಯುಕ್ತ ರಂಗ ಚಾಲನಾ ಸಮಿತಿ ಸಭೆಯಲ್ಲಿ ತಮ್ಮ ಪಕ್ಷದ ಈ ಸೂತ್ರವನ್ನು ತಾವು ಮಂಡಿಸಿದ್ದಾಗಿ ಡಿಎಂಕೆ ಅಧ್ಯಕ್ಷ ಹಾಗೂ ತಮಿಳು ನಾಡಿನ ಮುಖ್ಯಮಂತ್ರಿ ಕರುಣಾನಿಧಿವರು ಇಂದು ಪತ್ರಿಕಾಗೋಷ್ಠಿಯಲ್ಲಿ ಇಂದು ಬಹಿರಂಗಪಡಿಸಿದರು.

ADVERTISEMENT

ರಾಷ್ಟ್ರೀಯ ಜನತಾ ದಳವು ಸಂಯುಕ್ತರಂಗ ಸರ್ಕಾರಕ್ಕೆ ಕಾಂಗ್ರೆಸ್‌ನಂತೆಯೇ ಬಾಹ್ಯಬೆಂಬಲ ನೀಡುವುದಾದಲ್ಲಿ ಅದನ್ನು ಸಂಯುಕ್ತ‌ರಂಗ ಒಪ್ಪಿಕೊಳ್ಳುತ್ತದೆ ಎಂದು ಅವರು ಹೇಳಿದರು.

l ವೀರಪ್ಪನ್‌ ತಾಣದತ್ತ ಸಂಧಾನ ತಂಡ

ಕೊಯಮತ್ತೂರು, ಜುಲೈ 20 (ಪಿಟಿಐ)– ಕರ್ನಾಟಕದ 9 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿರುವ ದಂತಚೋರ ವೀರಪ್ಪನ್‌ ಈಗ ಬರಗೂರು, ಕದಂಬೂರು, ತಲವಾಡಿ ಮತ್ತು ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾನೆ ಎಂದು ಅಂದಾಜಿಸಲಾಗಿದ್ದು ಆತನೊಂದಿಗೆ ಸಂಧಾನಕ್ಕಾಗಿ ತಮಿಳುನಾಡು ಸರ್ಕಾರ ನೇಮಿಸಿರುವ ತಂಡ ಈಗ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ.

ವೀರಪ್ಪನ್‌ ಶರಣಾಗತಿಗೆ ಸಂಬಂಧಿಸಿದಂತೆಯೂ ಸಂಧಾನ ನಡೆಸುವ ಈ ತಂಡದ ಚಲನವಲನಗಳನ್ನು ರಹಸ್ಯವಾಗಿಡಲಾಗಿದೆ. ತಂಡ ಅರಣ್ಯ ಪ್ರವೇಶಿಸಿದ ಜಾಗದಲ್ಲಿ ಅರಣ್ಯ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ. ಆದರೆ ಈವರೆಗೆ ಸಂಧಾನ ತಂಡವನ್ನು ವೀರಪ್ಪನ್‌ ಸಂಪರ್ಕಿಸಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.