ADVERTISEMENT

25 ವರ್ಷಗಳ ಹಿಂದೆ: ಶನಿವಾರ, 13–09–1997

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 19:30 IST
Last Updated 12 ಸೆಪ್ಟೆಂಬರ್ 2022, 19:30 IST
   

ಜೆಎಂಎಂ: ರಾವ್‌ ವಿರುದ್ಧ ಕ್ರಮಕ್ಕೆ ದೆಹಲಿ ಹೈಕೋರ್ಟ್‌ ಅಸ್ತು

ನವದೆಹಲಿ, ಸೆ.12 (ಯುಎನ್‌ಐ, ಪಿಟಿಐ)– ಬಹುಕೋಟಿ ಜೆಎಂಎಂ ಲಂಚ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌, ಕೇಂದ್ರದ ನಾಲ್ವರು ಮಾಜಿ ಸಚಿವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೋಯ್ಲಿ ಅವರು ಸೇರಿ ಇಬ್ಬರು ಮುಖ್ಯಮಂತ್ರಿಗಳು ಮತ್ತು ಇತರ 11 ಜನರ ವಿರುದ್ಧ ಆರೋಪ ಸಿದ್ಧಪಡಿಸಿದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ದೆಹಲಿ ಹೈಕೋರ್ಟ್‌ ಸಮರ್ಥಿಸಿ ಅವರ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿಯನ್ನು ತಳ್ಳಿ ಹಾಕಿತು.

ಕಾನೂನು ಮತ್ತು ಸಾಂವಿಧಾನಿಕ ದೃಷ್ಟಿಯಿಂದ ಮಹತ್ವದ್ದು ಎಂದು ಪರಿಗಣಿಸಲಾದ 144 ಪುಟಗಳ ತೀರ್ಪನ್ನು ಕಿಕ್ಕಿರಿದ ನ್ಯಾಯಾಲಯದಲ್ಲಿ ಪ್ರಕಟಿಸಿದ ನ್ಯಾಯಮೂರ್ತಿ ಜಸ್ಪಾಲ್‌ ಸಿಂಗ್ ಅವರು ಸಿಬಿಐ 18 ಆರೋಪಿಗಳ ವಿರುದ್ಧ ಸಂಗ್ರಹಿಸಿದ ಸಾಕ್ಷ್ಯಗಳು ಭಾರತೀಯ ಅಪರಾಧ ಸಂಹಿತೆಯ 120 ಬಿ ವಿಧಿಯ ಅನ್ವಯ (ಕ್ರಿಮಿನಲ್‌ ಒಳಸಂಚು) ಮತ್ತು 1988ರ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಅನ್ವಯ ಆರೋಪ ಸಿದ್ಧಪಡಿಸಲು ಸಾಕಷ್ಟಿವೆ ಎಂದು ಹೇಳಿದ್ದಾರೆ.

ADVERTISEMENT

ಇಂದು ಮದರ್‌ ತೆರೆಸಾ ಅಂತ್ಯಕ್ರಿಯೆ

ಕಲ್ಕತ್ತ, ಸೆ. 12 (ಪಿಟಿಐ, ಯುಎನ್‌ಐ)– ಮದರ್‌ ತೆರೇಸಾ ಅವರ ಅಂತ್ಯಸಂಸ್ಕಾರ ಹಾಗೂ ಆ ಸಂಬಂಧಿಸಿದ ಆರಾಧನಾ ವಿಧಿಗಳನ್ನು ನಾಳೆ ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಭಾರಿ ಸಿದ್ಧತೆಗಳು ನಡೆದಿದ್ದು, ದೇಶ– ವಿದೇಶಗಳಿಂದ ಗಣ್ಯರು ಈಗಾಗಲೇ ಕಲ್ಕತ್ತೆಯತ್ತ ಬರಲಾರಂಭಿಸಿದ್ದಾರೆ.

ನಾಳೆ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಸಂಸ್ಕಾರ ವಿಧಿಗಳಲ್ಲಿ ಭಾಗವಹಿಸಲು ಒಟ್ಟು 23 ದೇಶಗಳ ಗಣ್ಯರು ಆಗಮಿಸಲಿದ್ದು ಅವರಲ್ಲಿ ಕೆಲವರು ಈಗಾಗಲೇ ಬಂದಿದ್ದಾರೆ. ಇನ್ನುಳಿದವರು ಬೆಳಗಾಗುವುದರೊಳಗೆ ಆಗಮಿಸುವರು. ಅಲ್ಬೇನಿಯಾ, ಇಟಲಿ ಹಾಗೂ ಘಾನದ ಅಧ್ಯಕ್ಷರು ಈಗಾಗಲೇ ಆಗಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.