ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಮಂಗಳವಾರ 8–4–1997

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 19:30 IST
Last Updated 7 ಏಪ್ರಿಲ್ 2022, 19:30 IST
   

ಅಣ್ವಸ್ತ್ರ: ವಿಶ್ವಸಂಸ್ಥೆ ವಿಶೇಷ ಸಭೆಗೆ ಅಲಿಪ್ತರ ಆಗ್ರಹ

ನವದೆಹಲಿ, ಏ. 7 (ಯುಎನ್‌ಐ)– ರಾಸಾಯನಿಕ ಅಸ್ತ್ರಗಳ ವಿನಾಶ ಒಪ್ಪಂದವನ್ನು ಅಮೆರಿಕ ಹಾಗೂ ರಷ್ಯಾ ಸ್ಥಿರೀಕರಿಸದಿರುವ ಬಗ್ಗೆ ಅಲಿಪ್ತ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ ಮತ್ತು ಅಣ್ವಸ್‌ತ್ರಗಳ ನಾಶಕ್ಕೆ ಕಾಲಬದ್ಧ ಕಾರ್ಯಕ್ರಮವೊಂದನ್ನು ರೂಪಿಸಲು ವಿಶ್ವ ಸಂಸ್ಥೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಪಡಿಸಿವೆ.

ಇಂದು ಇಲ್ಲಿ ಆರಂಭವಾದ ಆಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ 12ನೇ ಸಮಾವೇಶದಲ್ಲಿ ಸಿದ್ಧಪಡಿಸಿರುವ ಕರಡು ಘೋಷಣೆಯಲ್ಲಿ ಜಾಗತಿಕ ನಿಶ್ಯಸ್ತ್ರೀಕರಣಕ್ಕೆ ಮನವಿ ಮಾಡಲಾಗಿದೆ ಹಾಗೂ ವಿಶ್ವಸಂಸ್ಥೆಯ ನಾಲ್ಕನೇ ವಿಶೇಷ ಅಧಿವೇಶನ ಕರೆಯಲು ಕಾಲ ಪಕ್ವವಾಗಿದೆ ಎಂದು ಪ್ರಕಟಣೆಯನ್ನು ನಾಳೆ ಅಂಗೀಕರಿಸಲಾಗುವುದು.

ADVERTISEMENT

ಗೌಡರ ಪದತ್ಯಾಗ ನಂತರ ಕಾಂಗ್ರೆಸ್ ರಾಜೀ ಸೂತ್ರ

ನವದೆಹಲಿ, ಏ. 7– ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವಿಶ್ವಾಸ ಮತ ಪಡೆಯುವ ಮುನ್ನ ಪದತ್ಯಾಗ ಮಾಡಿದರೆ ಕಾಂಗ್ರೆಸ್‌ ಮುಂದಿನ ಪರ್ಯಾಯ ವ್ಯವಸ್ಥೆಯ ಬಗ್ಗೆ ಸಂಯುಕ್ತ ರಂಗದ ಜತೆ ಯಾವುದೇ ಷರತ್ತಿಲ್ಲದೆ ಮಾತುಕತೆ ನಡೆಸಲು ಬದ್ಧವಾಗಿರುವುದಾಗಿ ಕಾಂಗ್ರೆಸ್‌ ಕಾರ್ಯಕಾರಿಣಿ ಸದಸ್ಯ ಕೆ. ಕರುಣಾಕರನ್ ಅವರು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ಸಂಯುಕ್ತ ರಂಗದ ನಾಯಕರ ಜತೆ ಅನೌಪಚಾರಿಕವಾಗಿ ಮಾತುಕತೆ ನಡೆಸುತ್ತಿರುವ ಕರುಣಾಕರನ್ ಇಂದು ತಮ್ಮನ್ನು ಭೇಟಿಯಾದ ವರದಿಗಾರರ ಜತೆ ಮಾತನಾಡುತ್ತ ಈ ರಾಜೀ ಸೂತ್ರವನ್ನು ಹೊರಗೆಡವಿದರು.

ಈ ವಿಷಯವಾಗಿ ಶನಿವಾರ ಸಂಯುಕ್ತ ರಂಗದ ಚಾಲನಾ ಸಮಿತಿಯ ಸಂಚಾಲಕ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಜತೆ ತಾವು ಮತ್ತು ಕಾಂಗ್ರಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಚರ್ಚಿಸಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.