ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ 6–1–1997

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:30 IST
Last Updated 5 ಜನವರಿ 2022, 19:30 IST
   

ಕನ್ನಡ ಸಂಸ್ಕೃತಿಗೆ ಅನುದಾನ ಕಡಿತ: ಸಚಿವೆ ಅತೃಪ್ತಿ

ಬೆಂಗಳೂರು, ಜ. 5– ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾರ್ಷಿಕ ಅನುದಾನದಲ್ಲಿ ಎರಡೂವರೆ ಕೋಟಿ ಮೊತ್ತವನ್ನು (ಶೇ ಹತ್ತರಷ್ಟು) ಕಡಿಮೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನ ಇಲ್ಲಿ ಇಂದು ನಡೆದ ರಾಜ್ಯ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಟು ಟೀಕೆಗೆ ಒಳಗಾಯಿತು.

ಇಲಾಖೆಯ ಅನುದಾನದಲ್ಲಿ ಕಡಿತ ಮಾಡುವುದು ಎಂದರೆ ರಾಜ್ಯದ ಹತ್ತೂ ಅಕಾಡೆಮಿಗಳ ಆರ್ಥಿಕ ಶಕ್ತಿಯನ್ನು ಇನ್ನಷ್ಟು ಉಡುಗಿಸುವುದು ಎಂದೇ ಅರ್ಥ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೌಲ್ಯ ಗೊತ್ತಿದ್ದವರು ಮಾಡುವ ಕೆಲಸ ಇದಲ್ಲ ಎಂದು ದೂರಲಾಯಿತು.

ADVERTISEMENT

ಖ್ಯಾತ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ, ಮಾಜಿ ಸಚಿವ, ಶಾಸಕ ಕೆ.ಬಿ. ಶಾಣಪ್ಪ, ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಸಿ. ಚಂದ್ರಶೇಖರ್ ಈ ಸಂಬಂಧ ಮಾಡಿದ ಟೀಕೆಗೆ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರೂ ದನಿಗೂಡಿಸಿದರು.

ಸಾಹಿತ್ಯಕ್ಕೆ ರಾಜಕಾರಣಿಗಳ ನಂಟುಆಮೂರ ಸಮರ್ಥನೆ

ಬೆಂಗಳೂರು, ಜ. 5– ರಾಜಕೀಯ ಮತ್ತು ಸಾಹಿತ್ಯದ ನಡುವೆ ಅನ್ಯೋನ್ಯ ಸಂಬಂಧ ಇದೆ. ಅವರೆಡೂ ಒಂದಕ್ಕೊಂದು ವಿರೋಧವಲ್ಲ. ರಾಜಕೀಯ ಕೆಟ್ಟದ್ದೆಂದು ಭಾವಿಸುವುದು ಸರಿಯಲ್ಲ’ ಎಂದು ಖ್ಯಾತ ವಿಮರ್ಶಕ ಡಾ.ಜಿ. ಎಸ್. ಆಮೂರ ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಇತ್ತೀಚೆಗೆ ರಾಜಕೀಯ–ಸಂಸ್ಕೃತಿ– ಸಾಹಿತ್ಯಗಳ ನಡುವಿನ ಸಂಬಂಧದ ಬಗ್ಗೆ ಎದ್ದಿರುವ ಗೊಂದಲ, ’ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣೆಗಳ ಮೇಲುಗೈ’ ಮುಂತಾದ ಸಂಗತಿಗಳ ಬಗ್ಗೆ ‘ಶಂ.ಬಾ.ವಿಚಾರ ವೇದಿಕೆ’ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನಗಳು ಜಂಟಿಯಾಗಿ ಏರ್ಪಡಿಸಿದ ಅಭಿನಂದನಾ ಸಮಾರಂಭದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ಸಾಹಿತ್ಯ ಕೂಡ ರಾಜಕೀಯದಂತೆಯೇ ಒಂದು ಶಕ್ತಿ , ರಾಜಕೀಯ ಕೆಟ್ಟದ್ದೇನಲ್ಲ. ಹಾಗಾಗಿ ಒಟ್ಟಾರೆ ಸ್ಥಿತಿಯಲ್ಲಿ ರಾಜಕಾರಣವನ್ನು ಬೇರೆಯಾಗಿ ನೋಡುವುದು ಸರಿಯಲ್ಲ. ರಾಜಕಾರಣವನ್ನು ಒಟ್ಟಾರೆ ಸಾಂಸ್ಕೃತಿಕ ಬೆಳವಣಿಗೆಗೆ ಒಳಸಿಕೊಳ್ಳಬೇಕು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.