ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ, 20–1–1997

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:02 IST
Last Updated 19 ಜನವರಿ 2022, 15:02 IST
   

ಮಧ್ಯಂತರ ಚುನಾವಣೆ ಇಲ್ಲ: ದೇವೇಗೌಡ

ಬೆಂಗಳೂರು, ಜ. 19– ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಲ್‌.ಕೆ.ಅಡ್ವಾಣಿ ಅವರ ಹೇಳಿಕೆಯನ್ನು ತಳ್ಳಿ ಹಾಕಿದ ಪ್ರಧಾನಿ ಎಚ್‌.ಡಿ.ದೇವೇಗೌಡರು, ‘ಇದು ಕೇವಲ ಅಡ್ವಾಣಿ ಅವರ ಕಲ್ಪನೆ’ ಎಂದು ಲೇವಡಿ ಮಾಡಿದರು.

ಚೆನ್ನೈನಿಂದ ಇಂದು ನಗರಕ್ಕೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಭೇಟಿ ಮಾಡಿ ಎಲ್‌.ಕೆ.ಅಡ್ವಾಣಿ ಅವರ ‘1997 ಚುನಾವಣೆಗಳ ವರ್ಷವಾಗಲಿದೆ. ದೇಶ ಲೋಕಸಭೆಗೆ ಮಧ್ಯಂತರ ಚುನಾವಣೆಯನ್ನು ಎದುರಿಸಲಿದೆ’ ಎಂಬ ಹೇಳಿಕೆಯತ್ತ ಗಮನ ಸೆಳೆದಾಗ ‘ಸಂಯುಕ್ತರಂಗ ಸರ್ಕಾರ ಸುಭದ್ರವಾಗಿರುವುದರಿಂದ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಯಾವುದೇ ಸಾಧ್ಯತೆ ಇಲ್ಲ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಸೀತಾರಾಂ ಕೇಸರಿ ಅವರು ಸಂಯುಕ್ತರಂಗ ಸರ್ಕಾರಕ್ಕೆ ನೀಡಿರುವ ಬೇಷರತ್‌ ಬೆಂಬಲದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಈಗಾಗಲೇ ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವವರೆಗೆ ಅಥವಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಬೇಷರತ್‌ ಬೆಂಬಲದ ತನ್ನ ನಿರ್ಧಾರವನ್ನು ಬದಲು ಮಾಡುವವರೆಗೆ ಸಂಯುಕ್ತರಂಗ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.