ADVERTISEMENT

50 ವರ್ಷಗಳ ಹಿಂದೆ | ಶನಿವಾರ, 3-10-1970

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 15:45 IST
Last Updated 2 ಅಕ್ಟೋಬರ್ 2020, 15:45 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ತಮ್ಮ ಪತಿಯ ಸಾವಿನ ಪರಿಸ್ಥಿತಿ ಬಗ್ಗೆ ಲಲಿತಾ ಶಾಸ್ತ್ರಿ ಸಂಶಯ

ನವದೆಹಲಿ, ಅ. 2– ದಿ. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಪತ್ನಿ ಶ್ರೀಮತಿ ಲಲಿತಾ ಶಾಸ್ತ್ರಿ ಅವರು 1966ರ ಜನವರಿ 11ರಂದು ತಷ್ಕೆಂಟಿನಲ್ಲಿ ತಮ್ಮ ಪತಿ ನಿಧನರಾದ ಪರಿಸ್ಥಿತಿಯ ಬಗ್ಗೆ ಕೆಲವು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಪತಿಯ ನಿಧನದ ನಂತರ ಮೊದಲ ಬಾರಿಗೆ ಸಂಶಯ ವ್ಯಕ್ತಪಡಿಸುತ್ತಿರುವ ಅವರು ‘ಧರ್ಮಯುಗ’ ಹಿಂದಿ ವಾರಪತ್ರಿಕೆಗೆ ಸಂದರ್ಶನ ನೀಡುತ್ತಾ, ‘ಅವರು ಹೃದಯಾಘಾತಕ್ಕೆ ಮುನ್ನ ಫ್ಲಾಸ್ಕಿನಿಂದ ನೀರು ತೆಗೆದುಕೊಂಡು ಕುಡಿದಿದ್ದರು’ ಎಂದು ತಿಳಿಸಿದರು.

ADVERTISEMENT

ಒಂದು ಮಹತ್ವದ ಸಂಗತಿ ಎಂದರೆ, ಶ್ರೀ ಶಾಸ್ತ್ರಿ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಕೋಣೆಯೊಳಗೆ ಪ್ರವೇಶಿಸಿದಾಗ ಬಿಕ್ಕಿ ಅಳುತ್ತಿದ್ದ ಶಾಸ್ತ್ರಿ ಅವರು ನೀರಿದ್ದ ಫ್ಲಾಸ್ಕಿನತ್ತ ತೋರಿಸಿದರು. ಅವರು ನೀರು ಬೇಕೆಂದು ಕೇಳುತ್ತಿದ್ದಾರೆಂದು ಕೋಣೆಯಲ್ಲಿದ್ದ ಜನರು ಭಾವಿಸಿದರು. ಆದರೆ, ನೀರು ಕೊಟ್ಟಾಗ ಅದನ್ನು ಬೇಡವೆಂದು ಹೇಳಿ ಮೇಲಿಂದ ಮೇಲೆ ಫ್ಲಾಸ್ಕಿನತ್ತ ತೋರಿಸುತ್ತಾ ಅವರು
ಪ್ರಜ್ಞಾಹೀನರಾಗಿ ಬಿದ್ದರು ಎಂದು ಹೇಳಿದರು.

ಜಂಬೂ ಸವಾರಿಗೆ ಬದಲು ಬೇರೆ ಮೆರವಣಿಗೆ ನಡೆಸಲು ಮೈಸೂರು ನಗರಸಭೆ ನಿರ್ಧಾರ

ಮೈಸೂರು, ಅ. 2– ಮೈಸೂರು ನಗರದ ಪ್ರಾಮುಖ್ಯತೆ ಕಡಿಮೆಯಾಗುವಂತೆ ಬದಲಾದ ಪರಿಸ್ಥಿತಿಯಲ್ಲಿ ಜಂಬೂಸವಾರಿಗೆ ಬದಲು ಬೇರೆ ಮೆರವಣಿಗೆ ನಡೆಸಲು ನಗರಸಭೆ ಇಂದು ನಿರ್ಧರಿಸಿ, ಇದಕ್ಕೆ ಅನುಮತಿ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತು.

ಈ ವರ್ಷವೇ ದಸರಾ ಉತ್ಸವವನ್ನು ನಾಡಹಬ್ಬವಾಗಿ ಆಚರಿಸುವ ಬಗ್ಗೆ ಸಮಾವೇಶಗೊಂಡಿದ್ದ ನಗರಸಭೆ ವಿಶೇಷ ಅಧಿವೇಶನವು, ಈ ವೆಚ್ಚಗಳಿಗಾಗಿ ಎರಡು ಲಕ್ಷ ರೂ. ಸಹಾಯಧನ ನೀಡಬೇಕೆಂದೂ ನಗರಸಭೆ ನಿಧಿಯಿಂದ 25 ಸಾವಿರ ರೂ.ಗಳನ್ನು ವೆಚ್ಚ ಮಾಡಲು ಒಪ್ಪಿಗೆ ನೀಡಬೇಕೆಂದೂ ಸರ್ಕಾರವನ್ನು ಪ್ರಾರ್ಥಿಸಿತು.

ಹಾಸನ–ಆಲೂರು ಮಧ್ಯೆ ಗೂಡ್ಸ್‌ ರೈಲು ಸಂಚಾರ ಆರಂಭ

ಹಾಸನ, ಅ. 2– ಹಾಸನ–ಮಂಗಳೂರು ಮಧ್ಯೆ ನಿರ್ಮಾಣವಾಗುತ್ತಿರುವ ಮೀಟರ್‌ಗೇಜ್‌ ರೈಲು ರಸ್ತೆಯಲ್ಲಿ ಹಾಸನದಿಂದ ಆಲೂರುವರೆಗೆ (8 ಮೈಲಿ) ಗೂಡ್ಸ್‌ ರೈಲುಗಳ ಓಡಾಟವನ್ನು ಜಿಲ್ಲಾಧಿಕಾರಿ ಶ್ರೀ ಡಿ.ಕೃಷ್ಣ ಅವರು ಇಂದು ಉದ್ಘಾಟಿಸಿದರು.

ಹಾಸನ–ಮಂಗಳೂರು ರೈಲು ಮಾರ್ಗ ಸಿದ್ಧವಾದ ಮೇಲೆ ಮಂಗಳೂರು ಬಂದರಿಗೆ ಸರಕುಗಳನ್ನು ರವಾನಿಸಲು ಅನುಕೂಲವಾಗುವುದೆಂದ ಜಿಲ್ಲಾಧಿಕಾರಿಗಳು, ಈ ರೈಲು ಮಾರ್ಗದಿಂದ ಹಾಸನದ ಪ್ರಗತಿಗೆ ನೆರವಾಗುವುದೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.