ಎಲ್.ಎಸ್.ಶೇಷಗಿರಿ ರಾಯರು
1995 ನೆಯ ಇಸವಿ. ರವೀಂದ್ರ ಕಲಾಕ್ಷೇತ್ರದಲ್ಲೊಂದು ಕಾರ್ಯಕ್ರಮ. ಪ್ರೊ. ಎಲ್.ಎಸ್.ಶೇಷಗಿರಿ ರಾಯರದೇ ಅಧ್ಯಕ್ಷತೆ. ಕಾರ್ಯಕ್ರಮ ಮುಗಿದ ಮೇಲೆ ‘ನೀವು ಶ್ರೀಧರ ಮೂರ್ತಿಯವರಲ್ಲವೆ?’ ಎಂದು ಅವರೇ ಮಾತನಾಡಿಸಿದರು. ನಾನು ಅಚ್ಚರಿಯಿಂದ ‘ಹೌದು’ ಎಂದಾಗ ‘ನಮ್ಮ ಮನೆಗೆ ಬರಬೇಕಲ್ಲ’ ಎಂದು ಆಹ್ವಾನ ಕೊಟ್ಟರು. ‘ಯಾವಾಗ’ ಎಂದರೆ ‘ನೀವು ವೃತ್ತಿಯಲ್ಲಿರುವವರು ಹೇಳಬೇಕು, ನಾನಾದರೂ ನಿವೃತ್ತ’ ಎಂದರು. ಅದರಂತೆ ಅವರ ಮನೆಗೆ ಹೋದಾಗ ಅವರ ಎಲ್ಲಾ ಪುಸ್ತಕಗಳ ಕಟ್ಟನ್ನು ಕೊಟ್ಟು ‘ಇದೆಲ್ಲವನ್ನೂ ಓದಿದ ಮೇಲೆ ನಿಮ್ಮ ಅಭಿಪ್ರಾಯ ಹಾಗೇ ಇದ್ದರೆ, ನನ್ನ ಆಕ್ಷೇಪವಿಲ್ಲ’ ಎಂದು ಗಂಭೀರ ಸ್ವರದಲ್ಲಿ ಹೇಳಿದರು. ಆಗ ನನಗೆ ಹೊಳೆಯಿತು ಅವರನ್ನು ಒಂದು ಲೇಖನದಲ್ಲಿ ‘ತಿಳಿ ಮಜ್ಜಿಗೆಯ ವಿಮರ್ಶಕರು’ ಎಂದು ಕರೆದಿದ್ದೆ. ಆದರೆ ಮುಂದೆ ಅವರ ನಿಕಟ ಒಡನಾಟ ಬೆಳೆಯಲು ಇದು ಕಾರಣವಾಯಿತು. ಭಾರತೀಯ ವಿದ್ಯಾ ಭವನವು ಆಳಸಿಂಗಾಚಾರ್ಯರ ಮಹಾಭಾರತದ ಹದಿನೆಂಟು ಸಂಪುಟಗಳನ್ನು ಪ್ರಕಟಿಸಿತು. ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿ ಕೂಡ ಮಹಾಭಾರತ ಬಂದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯ ಬಂದಿತು. ಅದನ್ನು ಬರೆಯುವ ಹೊಣೆಗಾರಿಕೆ ಶೇಷಗಿರಿ ರಾಯರಿಗೇ ಬಂದಿತು. ಅದರ ಸಹಯೋಗವನ್ನು ನಾನೇ ಮಾಡಿದ್ದರಿಂದ ಇನ್ನಷ್ಟು ನಿಕಟ ಒಡನಾಟ ಸಿಕ್ಕಿತು.
2005ನೆಯ ಇಸವಿ ಫೆಬ್ರುವರಿ 8ನೆಯ ತಾರೀಖು ಆಗ ಭಾರತೀಯ ವಿದ್ಯಾ ಭವನದ ನಿರ್ದೇಶಕರಾಗಿದ್ದ ಮತ್ತೂರು ಕೃಷ್ಣಮೂರ್ತಿಯವರು ಪೋನ್ ಮಾಡಿ ‘ನಿಮ್ಮ ಹಸ್ತಪ್ರತಿ ಯಾವಾಗ ಸಿಗುತ್ತದೆ’ ಎಂದರು. ನನಗೆ ಅಚ್ಚರಿ ಮತ್ತು ಆತಂಕ ‘ಯಾವ ಹಸ್ತಪ್ರತಿ’ ಎಂದರೆ ‘ಅದೇ ಶೇಷಗಿರಿ ರಾಯರ ಪುಸ್ತಕ, ಫೆಬ್ರುವರಿ 16ಕ್ಕೆ ಬಿಡುಗಡೆ’ ಎಂದರು. ನಾನೂ ಕೂಡಲೇ ಶೇಷಗಿರಿ ರಾಯರಿಗೆ ಪೋನ್ ಮಾಡಿದೆ. ಅದಕ್ಕೆ ಅವರು ಬಹು ತಾಳ್ಮೆಯಿಂದಲೇ ‘ನೋಡು ಫೆಬ್ರುವರಿ 16ಕ್ಕೆ ಭಾರತೀಯ ವಿದ್ಯಾಭವನದವರು ನನ್ನ ಎಂಬತ್ತನೆಯ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ರಾಜ್ಯಪಾಲರಾದ ಟಿ.ಎನ್.ಚತುರ್ವೇದಿ ಬರುತ್ತಿದ್ದಾರೆ. ಹೀಗಿರುವಾಗ ಬರೀ ಕಾರ್ಯಕ್ರಮ ಎಂದರೆ ಹೇಗೆ? ನೀನು ನನ್ನ ಎಲ್ಲಾ ಪುಸ್ತಕ ಓದಿದ್ದಿ, ಒಂದು ಪುಸ್ತಕ ಬರೆ’ ಎಂದರು. ಆದರೆ ಇನ್ನು ಬರೆಯುವುದು ಯಾವಾಗ, ಮುದ್ರಣ ಆಗುವುದು ಯಾವಾಗ ಎಂಟೇ ದಿನ ಉಳಿದಿದೆ. ಅವರ ಪ್ರೀತಿಗೆ ಇಲ್ಲ ಎನ್ನಲಾಗಲಿಲ್ಲ. ಒಂದು ದಿನ ಬರವಣಿಗೆ ಮತ್ತೊಂದು ದಿನ ಪ್ರೂಫ್ ಇನ್ನೊಂದು ದಿನ ಮುದ್ರಣ ಹೀಗೆ ಪುಸ್ತಕ ಸಿದ್ದವಾಗಿ ಬಿಡುಗಡೆಯೂ ಆಯಿತು. ನನಗೆ ಸಮಾಧಾನವೇ ಇಲ್ಲ. ‘ಹೀಗೆಲ್ಲಾ ಪುಸ್ತಕ ಬರೆಯ ಬಾರದು’ ಎಂದು ಅವರ ಬಳಿ ಹೇಳುತ್ತಲೇ ಇದ್ದೆ.
ಇದಾದ ಎರಡು ವರ್ಷಕ್ಕೆ ಅವರು ಉಡುಪಿಯಲ್ಲಿ ನಡೆದ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರು ಪೋನ್ ಮಾಡಿ ‘ನೀವು ಎಲ್.ಎಸ್.ಎಸ್ ಬಗ್ಗೆ ಒಂದು ಪುಸ್ತಕ ಬರೆಯುತ್ತೀರಂತೆ, ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತದೆ, ಆದಷ್ಟು ಬೇಗ ಹಸ್ತಪ್ರತಿ ಕೊಡಿ’ ಎಂದರು. ಕೆಲವೇ ನಿಮಿಷದಲ್ಲಿ ಶೇಷಗಿರಿ ರಾಯರೇ ಪೋನ್ ಮಾಡಿ ‘ನಿನಗೆ ಪುಸ್ತಕ ಸಮಾಧಾನವಾಗಿರಲಿಲ್ಲವಲ್ಲ. ಈ ಸಲ ತೃಪ್ತಿಯಿಂದ ಬರೆ’ ಎಂದು ನಕ್ಕರು. ಈ ಸಲ ಅಧ್ಯಯನಕ್ಕೆ ಸಾಕಷ್ಟು ಅವಕಾಶ ಸಿಕ್ಕಿತು. ಪುಸ್ತಕ ಚೆನ್ನಾಗಿಯೂ ಬಂದಿತು. ಸಮ್ಮೇಳನದಲ್ಲಿ ಎಂ.ಎಚ್.ಕೃಷ್ಣಯ್ಯ ಅದನ್ನು ಬಿಡುಗಡೆ ಮಾಡಿದರು. ಅವರು ಮತ್ತು ಶೇಷಗಿರಿ ರಾಯರು ಮುಜುಗರವಾಗುವಂತೆ ನನ್ನನ್ನು ಹೊಗಳಿ ಸಂಕೋಚ ತಂದರು.
ತೊಂಬತ್ತು ವರ್ಷಕ್ಕೂ ಮೀರಿದ ಘನತೆಯ ಜೀವನ ನಡೆಸಿದ ಶೇಷಗಿರಿ ರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮಿರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರ ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪುಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿ ರಾಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಿದ್ದರೂ ನವೋದಯದ ದಿಗ್ಗಜರ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಗಟ್ಟಿತನ ಅವರಿಗೆ ಇತ್ತು ಎನ್ನುವುದನ್ನು ಗಮನಿಸಬೇಕು. ಪ್ರಗತಿಶೀಲರಲ್ಲಿ ಅನೇಕರು ಅವರಿಗೆ ವೈಯಕ್ತಿಕವಾಗಿ ಆಪ್ತರು. ಹೀಗಿದ್ದರೂ ಅವರು ಈ ಚಳವಳಿಯ ಮಿತಿಗಳನ್ನು ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ಶೇಷಗಿರಿ ರಾಯರು ನವ್ಯ ಬರಹಗಾರರ ಮಹತ್ವವನ್ನೂ ಗುರುತಿಸಿದರು. ಅದರ ಮಿತಿಗಳನ್ನು ಗುರುತಿಸಿದರು. ನವ್ಯ ಚಳವಳಿ ಏಕೆ ಕನ್ನಡದಲ್ಲಿ ವಿಫಲವಾಯಿತು ಎಂದು ಚರ್ಚಿಸಲು ಪ್ರಯತ್ನಿಸಿದವರಲ್ಲಿ ಶೇಷಗಿರಿ ರಾಯರೇ ಮೊದಲಿಗರು. ದಲಿತ, ಬಂಡಾಯ, ಮುಸ್ಲಿಂ ಸಾಹಿತ್ಯ, ಮಹಿಳಾ ಸಾಹಿತ್ಯ ಎಲ್ಲವನ್ನೂ ಅವರು ಮುಕ್ತ ಮನಸ್ಸಿನ ಸ್ವಾಗತಿಸಿ ಅದರ ಶಕ್ತಿಗಳನ್ನು ಗುರುತಿಸಿದಂತೆ ಮಿತಿಗಳ ಕುರಿತೂ ಬರೆದರು. ಶೇಷಗಿರಿ ರಾಯರು ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಹೀಗೆ ಬರೆಯುವಾಗ ಸಮಾಜದ ಎಲ್ಲಾ ವರ್ಗದವರಿಗೂ ತಮ್ಮ ಚಿಂತನೆಗಳು ತಲುಪುವಂತೆ ಬರೆದರು. ಸರಳತೆ ಬರಹದಲ್ಲಿದ್ದರೂ ಕೂಡ ಅವರು ಒಳನೋಟಗಳಲ್ಲಿ ಗಹನತೆಯನ್ನು ಬಿಟ್ಟು ಕೊಡಲಿಲ್ಲ.
2020ರ ಸುಮಾರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿಗಳಾದ ಮಹಾಲಿಂಗೇಶ್ವರ ಭಟ್ ಅವರು ಕೇಂದ್ರ ಸಾಹಿತ್ಯ ಅಕಾಡಮಿ ‘ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ’ಗೆ ಶೇಷಗಿರಿರಾಯರ ಬಗ್ಗೆ ಪುಸ್ತಕ ಬರೆದು ಕೊಡುತ್ತೀರ’ ಎಂದು ಕೇಳಿದರು. ನಾನು ಈಗಾಗಲೇ ಎರಡು ಪುಸ್ತಕ ಬರೆದಿದ್ದೇ, ಬೇಡ ಎಂದರೆ ಇದರ ಸ್ವರೂಪ ಬೇರೆ ಎಂದು ಅವರು ಒತ್ತಾಯಿಸಿದರು. ಆಗ ಶೇಷಗಿರಿ ರಾಯರು ಇರಲಿಲ್ಲ. ಅವರ ಮಡದಿ ಭಾರತಿ ಮೇಡಂ ಅದೇ ಪ್ರೀತಿಯಿಂದ ಪುಸ್ತಕಗಳನ್ನು ಕೊಟ್ಟು ಮಾರ್ಗದರ್ಶನ ನೀಡಿದರು. ಹೀಗೆ ನಾನು ಶೇಷಗಿರಿ ರಾಯರ ಬಗ್ಗೆ ಮೂರು ಪುಸ್ತಕಗಳನ್ನು ಬರೆದೆ. ಮೂರೂ ಭಿನ್ನವಾಗಿದ್ದಿರ ಜೊತೆಗೆ ಈ ಕುರಿತ ಅಧ್ಯಯನ ನನ್ನನ್ನು ಬೆಳೆಸಿತು. ಇದೂ ಕೂಡ ಒಂದು ರೀತಿಯಲ್ಲಿ ಶೇಷಗಿರಿ ರಾಯರು ನನ್ನ ಮೇಲಿಟ್ಟಿದ್ದ ಪ್ರೀತಿಯ ಕುರುಹು ಎನ್ನಬಹುದೇನೋ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.