ಬಿ.ಆರ್. ಗವಾಯಿ
ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಆರ್. ಗವಾಯಿ ಅವರು ಸಾರ್ವಜನಿಕವಾಗಿ ನ್ಯಾಯಾಂಗವು ಹೇಗಿರಬೇಕು ಎಂಬುದರ ಕುರಿತು ಭಿನ್ನ ನಿಲುವು ಹೊಂದಿದ್ದಾರೆ. ಈ ಹಿಂದೆ ಇದ್ದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಾಂಗದಲ್ಲಿರುವವರು ಬಹಿರಂಗವಾಗಿ ಏನನ್ನೂ ಹೇಳಬಾರದು ಎಂಬ ನಿಲುವು ಹೊಂದಿದ್ದರು. ಆದರೆ, ಮಾಧ್ಯಮದ ಜೊತೆಗೆ ಸೀಮಿತ ಸಂವಹನ ಇರಬೇಕು ಎಂದು ನ್ಯಾಯಮೂರ್ತಿ ಗವಾಯಿ ಅವರು ಹೇಳುತ್ತಾರೆ.
ಮೋದಿ ಎಂಬ ಉಪನಾಮಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ನೀಡಿದ್ದಾರೆ ಎನ್ನಲಾದ ಹೇಳಿಕೆಯು ಮಾನಹಾನಿಕರ ಎಂದು ವಿಚಾರಣಾ ನ್ಯಾಯಾಲಯವು ನೀಡಿದ ತೀರ್ಪಿಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದನ್ನು ರಾಹುಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ 2023ರ ಜುಲೈ 23ರಂದು ವಿಚಾರಣೆ ನಿಗದಿಯಾಗಿತ್ತು. ಪೀಠದಲ್ಲಿದ್ದವರು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ. ವಿಚಾರಣೆ ಆರಂಭಕ್ಕೂ ಮೊದಲೇ ಗವಾಯಿ ಅವರು ಮಾತನಾಡಿದರು.
‘ನನ್ನ ಮುಂದಿರುವ ಕಷ್ಟವೊಂದನ್ನು ನಾನು ಎರಡೂ ಕಡೆಯವರ ಮುಂದೆ ವ್ಯಕ್ತಪಡಿಸಲೇಬೇಕು. ನನ್ನ ತಂದೆಯವರು ಕಾಂಗ್ರೆಸ್ ಸದಸ್ಯರಲ್ಲದಿದ್ದರೂ ಒಂದಷ್ಟು ಕಾಲ ಆ ಪಕ್ಷದ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು... ಅದು ನಿಮಗೆ ವೈಯಕ್ತಿಕವಾಗಿ ಗೊತ್ತಿದೆ. 40ಕ್ಕೂ ಹೆಚ್ಚು ವರ್ಷ ಅವರು ಕಾಂಗ್ರೆಸ್‌ಗೆ ಹತ್ತಿರವಾಗಿದ್ದರು. ಕಾಂಗ್ರೆಸ್ ಬೆಂಬಲದಿಂದ ಅವರು ಸಂಸದರಾಗಿದ್ದರು, ವಿಧಾನ ಪರಿಷತ್ ಸದಸ್ಯರಾಗಿದ್ದರು. ನನ್ನ ಸಹೋದರ ಈಗಲೂ ರಾಜಕಾರಣದಲ್ಲಿದ್ದಾರೆ ಮತ್ತು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ. ಈ ರೀತಿಯ ಹಿನ್ನೆಲೆ ನನಗೆ ಇರುವುದರಿಂದ ನಾನು ವಿಚಾರಣೆ ನಡೆಸಬೇಕೇ ಎಂಬುದರ ಕುರಿತು ನೀವೇ ನಿರ್ಧಾರ ಕೈಗೊಳ್ಳಬೇಕು’.
ದೂರುದಾರರ ಪರ ಹಾಜರಿದ್ದವರು ಮಹೇಶ್ ಜೇಠ್ಮಲಾನಿ, ರಾಹುಲ್ ಪರ ಹಾಜರಿದ್ದವರು ಅಭಿಷೇಕ್ ಮನುಸಿಂಘ್ವಿ. ಈ ಇಬ್ಬರು ಘಟಾನುಘಟಿ ವಕೀಲರಿಗೆ ಗವಾಯಿ ಅವರ ನಿಷ್ಪಕ್ಷಪಾತ ನಿಲುವು, ನ್ಯಾಯಪರತೆ ಕುರಿತು ಯಾವ ಸಂದೇಹವೂ ಇರಲಿಲ್ಲ. ನೀವೇ ವಿಚಾರಣೆ ನಡೆಸಿ ಎಂದು ಇಬ್ಬರೂ ಸಂತೋಷದಿಂದಲೇ ಸಮ್ಮತಿಸಿದರು.
‘ನ್ಯಾಯದಾನ ಆದರಷ್ಟೇ ಸಾಲದು, ನ್ಯಾಯದಾನ ಆಗಿದೆ ಎಂಬುದು ಮನದಟ್ಟು ಕೂಡ ಆಗಬೇಕು’ ಎಂಬ ಮಾತಿನ ಮೇಲೆ ಗವಾಯಿ ಅವರಿಗೆ ಎಷ್ಟು ನಂಬಿಕೆ ಇದೆ ಎಂಬುದಕ್ಕೆ ಇದು ನಿದರ್ಶನ. ನ್ಯಾಯ ತೀರ್ಮಾನ ಮಾಡುವವರ ಮೇಲೆ ಎರಡೂ ಕಡೆಯವರಿಗೆ ಎಳ್ಳಷ್ಟೂ ಸಂದೇಹ ಇರಬಾರದು ಎಂಬುದನ್ನು ಗವಾಯಿ ಅವರು ಬಹಳ ಸ್ಪಷ್ಟವಾಗಿ ಖಚಿತಪಡಿಸಿಕೊಂಡರು. ಅದೇ ಭೂಷಣ್ ರಾಮಕೃಷ್ಣ ಗವಾಯಿ ಅವರು ಈಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ. ಅವರ ಅಧಿಕಾರಾವಧಿ ಆರು ತಿಂಗಳು ಮಾತ್ರ. ಆದರೆ, ಅವರು ಈ ಸ್ಥಾನದಲ್ಲಿ ಇದ್ದಷ್ಟು ದಿನ ನ್ಯಾಯದಾನದ ಕುರಿತು ಸಂದೇಹ ಮೂಡದು ಎಂಬುದಕ್ಕೆ ಈ ವಿಚಾರಣೆಯ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿಯೇ ಪುರಾವೆ.
ಹಲವು ಹೆಗ್ಗಳಿಕೆಗಳೊಂದಿಗೆ ಗವಾಯಿ ಅವರು ನ್ಯಾಯಾಂಗದ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಈ ಸ್ಥಾನಕ್ಕೇರಿದ ಬೌದ್ಧ ಧರ್ಮದ ಮೊದಲ ವ್ಯಕ್ತಿ ಅವರು. ಹಾಗೆಯೇ ಈ ಸ್ಥಾನ ಪಡೆದುಕೊಂಡ ದಲಿತ ಸಮುದಾಯದ ಎರಡನೇ ವ್ಯಕ್ತಿ. ಮೊದಲನೆಯವರು ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್. ಅವರು 2007ರ ಜನವರಿ 1ರಿಂದ 2010ರ ಮೇ 12ರವರೆಗೆ ಈ ಹುದ್ದೆಯಲ್ಲಿದ್ದರು.
ಬಿ.ಆರ್. ಗವಾಯಿ ಅವರ ತಂದೆ ರಾಮಕೃಷ್ಣ ಗವಾಯಿ ಅವರು ದಲಿತ ಸಮುದಾಯದಿಂದ ಬಂದವರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಜೊತೆಗೆ 1956ರಲ್ಲಿ ಬೌದ್ಧ ಧರ್ಮ ಸ್ವೀಕರಿಸಿದವರಲ್ಲಿ ರಾಮಕೃಷ್ಣ ಅವರೂ ಒಬ್ಬರು. ಅಂಬೇಡ್ಕರ್ ಅವರ ಸ್ಫೂರ್ತಿಯೇ ಕಾನೂನು ಕಲಿಯಲು ಕಾರಣ ಎಂದು ಗವಾಯಿ ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಕಾನೂನು ಕಲಿಕೆಯ ಮೂಲಕ ದಲಿತ ಸಮುದಾಯದ ವಿಮೋಚನೆ ಸಾಧ್ಯ ಎಂದು ತಮ್ಮ ತಂದೆ ಸದಾ ನಂಬಿದ್ದರು ಎಂಬುದೂ ಗವಾಯಿ ಅವರು ಕಾನೂನು ಕಲಿಯಲು ಕಾರಣ.
ಗವಾಯಿ ಅವರ ತಂದೆ ರಾಮಕೃಷ್ಣ ಗವಾಯಿ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಲ್ಲಿ ಸಕ್ರಿಯರಾಗಿದ್ದರು. ಅವರು ಅಮರಾವತಿಯಿಂದ ಸಂಸದರಾಗಿದ್ದರು. ರಾಜ್ಯಸಭೆಯ ಸದಸ್ಯರಾಗಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ 2006ರಿಂದ 2011ರ ನಡುವೆ ಬಿಹಾರ, ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿದ್ದರು. ಪ್ರಖರ ಅಂಬೇಡ್ಕರ್‌ವಾದಿಯಾಗಿದ್ದರು.
ಗವಾಯಿ ಅವರು 1985ರಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು. ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಆಗಿದ್ದ ರಾಜಾ ಎಸ್. ಭೋಂಸ್ಲೆ ಅವರ ಕೈಕೆಳಗೆ ಕಿರಿಯ ವಕೀಲರಾಗಿ ಸೇರಿಕೊಂಡರು. 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ನಡೆಸಿದರು. 1990ರ ನಂತರ ಮುಖ್ಯವಾಗಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿಯೇ ಕೆಲಸ ಮಾಡಿದರು. 2001ರ ಬಳಿಕ ಕೊಲಿಜಿಯಂಗಳು ಸತತವಾಗಿ ಅವರ ಹೆಸರನ್ನು ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ್ದವು. ಆದರೆ, ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಅವರು 2003ರ ನವೆಂಬರ್‌ವರೆಗೆ ಕಾಯಬೇಕಾಯಿತು. 2005ರಲ್ಲಿ ಕಾಯಂ ನ್ಯಾಯಮೂರ್ತಿಯಾದರು. 2019ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದುವವರೆಗೂ ಅಲ್ಲಿ ಕೆಲಸ ಮಾಡಿದ್ದಾರೆ.
ಗವಾಯಿ ಅವರ ಪದೋನ್ನತಿಯಲ್ಲಿಯೂ ಸಾಮಾಜಿಕ ನ್ಯಾಯದ ಒಂದು ಆಯಾಮ ಇದೆ ಎಂಬುದು ವಿಶೇಷ. 2019ರಲ್ಲಿ ಅವರ ಪದೋನ್ನತಿಯ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಜ್ಯೇಷ್ಠತೆಯಲ್ಲಿ ಗವಾಯಿ ನಾಲ್ಕನೆಯವರಾಗಿದ್ದರು. ‘ಗವಾಯಿ ಅವರ ನೇಮಕದ ಮೂಲಕ ದಶಕದ ಬಳಿಕ ಪರಿಶಿಷ್ಟ ಜಾತಿಯ ನ್ಯಾಯಮೂರ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ದೊರೆಯಲಿದ್ದಾರೆ’ ಎಂದು ಕೊಲಿಜಿಯಂ ನಿರ್ಣಯ ಕೈಗೊಂಡಿತ್ತು. ಆ ನಿರ್ಧಾರವು ಸುಪ್ರೀಂ ಕೋರ್ಟ್‌ಗೆ ಮೊದಲ ಬೌದ್ಧ ನ್ಯಾಯಮೂರ್ತಿಯನ್ನೂ ಕೊಟ್ಟಿರುವುದು ಇನ್ನೊಂದು ವಿಶೇಷ.
ಗವಾಯಿ ಅವರು ನ್ಯಾಯಮೂರ್ತಿಯಾಗಿ ಎರಡು ದಶಕಕ್ಕೂ ಹೆಚ್ಚು ಕೆಲಸ ಮಾಡಿದ್ದಾರೆ. ಹತ್ತಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕಾನೂನನ್ನು ಚಾಚೂ ತಪ್ಪದೆ ಪಾಲಿಸುವ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಪಡೆದುಕೊಂಡಿದ್ದಾರೆ.
ಚುನಾವಣಾ ಬಾಂಡ್ ಯೋಜನೆಯು ಮತದಾರರ ಮಾಹಿತಿ ಹಕ್ಕನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಯೋಜನೆ ಅಸಾಂವಿಧಾನಿಕ ಎಂದು ಘೋಷಣೆ ಮಾಡಿದ ಪೀಠದಲ್ಲಿ ಗವಾಯಿ ಅವರಿದ್ದರು. ಪರಿಶಿಷ್ಟ ಜಾತಿಯಲ್ಲಿರುವ ಕೆಲವು ಸಮುದಾಯಗಳಿಗೆ ಪ್ರಾತಿನಿಧ್ಯ ಕಡಿಮೆ ಇದೆ. ಹಾಗಾಗಿ, ಒಳಮೀಸಲಾತಿ ಕಲ್ಪಿಸಬೇಕು ಎಂಬ ತೀರ್ಪು ನೀಡಿದ್ದ ಪೀಠದ ಭಾಗವಾಗಿಯೂ ಅವರಿದ್ದರು. ಪರಿಶಿಷ್ಟ ಜಾತಿ/ಪಂಗಡದಲ್ಲಿ ಕೂಡ ಕೆನೆಪದರ ನೀತಿಯನ್ನು ಜಾರಿಗೆ ತರಬೇಕು ಎಂಬುದರ ಪ್ರಬಲ ಪ್ರತಿಪಾದಕ ಅವರು. ಪೌರನೊಬ್ಬ ಅಪರಾಧ ಎಸಗಿದ್ದಾನೆ ಎಂಬ ಆರೋಪ ಹೊರಿಸಿ, ಆತನ ವಾಸದ ಮನೆಯನ್ನು ಧ್ವಂಸ ಮಾಡುವುದು ಕಾನೂನುಬಾಹಿರ. ಇದು ನ್ಯಾಯಾಂಗ ಮತ್ತು ಕಾರ್ಯಾಂಗ ನಡುವಣ ಅಧಿಕಾರ ಹಂಚಿಕೆಯ ಉಲ್ಲಂಘನೆಯೂ ಹೌದು ಎಂದು ಅವರು ತೀರ್ಪು ನೀಡಿದ್ದರು. ಆ ಸಂದರ್ಭದಲ್ಲಿ ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಆರೋಪಿಗಳ ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ ಮನೆ ಮತ್ತು ಇತರ ಕಟ್ಟಡಗಳನ್ನು ನಾಶ ಮಾಡುವುದು ಆಡಳಿತ ನಡೆಸುವವರ ಪ್ರಧಾನ ಅಸ್ತ್ರವಾಗಿ ಚಾಲ್ತಿಯಲ್ಲಿತ್ತು. ಗವಾಯಿ ಅವರಿದ್ದ ಪೀಠವು ಇದಕ್ಕೆ ಸಂಬಂಧಿಸಿ ರಾಷ್ಟ್ರವ್ಯಾಪಿ ಮಾರ್ಗಸೂಚಿಯನ್ನೇ ರೂಪಿಸಿಕೊಟ್ಟಿತು.
ಜೊತೆಗೆ, ₹500 ಮತ್ತು ₹1000 ಮುಖಬೆಲೆಯ ನೋಟು ಅಮಾನ್ಯೀಕರಣವನ್ನು ಎತ್ತಿ ಹಿಡಿದ ಬಹುಮತದ ತೀರ್ಪನ್ನು ಬರೆದವರು ಗವಾಯಿ ಅವರೇ. ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂದಕ್ಕೆ ಪಡೆದ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿಹಿಡಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿಯೂ ಗವಾಯಿ ಅವರು ಇದ್ದರು.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅತೀವ ಮಹತ್ವವನ್ನು ನೀಡುವ ನ್ಯಾಯಮೂರ್ತಿಗಳಲ್ಲಿ ಗವಾಯಿ ಅಗ್ರಗಣ್ಯರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸೆರೆಯಲ್ಲಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿದ್ದರು. ಜಾಮೀನು ನೀಡದೇ ಇರುವುದು ಕೆಲವೊಮ್ಮೆ ಕಾನೂನಿನ ಉಲ್ಲಂಘನೆಯೂ ಆಗಬಹುದು ಎಂಬ ಎಚ್ಚರಿಕೆಯನ್ನು ಅವರು ಆಗ ನೀಡಿದ್ದರು. ಹೈಕೋರ್ಟ್‌ಗಳು ಜಾಮೀನು ನೀಡಬಹುದಾದ ಪ್ರಕರಣಗಳಲ್ಲಿಯೂ ಜಾಮೀನು ನೀಡದೇ ‘ಸುರಕ್ಷತೆಯ ಆಟ’ ಆಡಬಾರದು ಎಂದು ಗದರಿದ್ದರು.
ನ್ಯಾಯಪರತೆ, ಬದ್ಧತೆ, ಸಾಮಾಜಿಕ ನ್ಯಾಯದ ಕಳಕಳಿ, ಕಾನೂನು ಬದ್ಧತೆ, ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಅಪಾರ ಗೌರವವುಳ್ಳ ಮತ್ತು ಔನ್ನತ್ಯದ ಹಮ್ಮುಬಿಮ್ಮುಗಳಿಲ್ಲದ ಗವಾಯಿ ಅವರಿಂದ ಸ್ವಲ್ಪ ಅವಧಿಯಲ್ಲಿಯೇ ಅತಿ ಹೆಚ್ಚಿನ ನಿರೀಕ್ಷೆಯನ್ನು ಇರಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.