ಪ್ರೊ.ಎಸ್.ಬಾಲಚಂದ್ರರಾವ್
ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನದ ಯಾವುದೇ ಅಧ್ಯಯನದಲ್ಲಿ ಮರೆಯದೇ ಹೆಸರಿಸಬೇಕಾದ ಆಕರಗ್ರಂಥಗಳ ಕರ್ತೃ ಪ್ರೊಫೆಸರ್ ಎಸ್. ಬಾಲಚಂದ್ರ ರಾವ್. ಶಿವಮೊಗ್ಗೆಯ ಸಾಗರದ ಸಮೀಪದ ಹಳ್ಳಿಯೊಂದರಲ್ಲಿ ಜನಿಸಿದ ಅವರಿಗೆ ಗಣಿತದಲ್ಲಿ ಅತೀವ ಆಸಕ್ತಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಗಳಿಸಿದ ಅವರು ಮುಂದೆ ಗಣಿತದಲ್ಲಿಯೇ ಉನ್ನತಾಭ್ಯಾಸವನ್ನೂ ಮಾಡಿ ಪಿಎಚ್.ಡಿ ಗಳಿಸಿದರು. ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ವೃತ್ತಿಯನ್ನು ಆರಂಭಿಸಿದರು.
ಭಾರತೀಯ ಗಣಿತದ ಬಗ್ಗೆ ಅವರಿಗೆ ಇದ್ದ ಆಸಕ್ತಿ ಆ ಬಳಿಕ ಮೊಳಕೆಯೊಡೆಯಿತು. ಆಗ್ಗೆ ಫಲ ಜ್ಯೋತಿಷ ಮತ್ತು ಖಗೋಳ ಶಾಸ್ತ್ರಗಳನ್ನು ಪ್ರತ್ಯೇಕಿಸುವ ವಿಧಾನವೇ ಇರಲಿಲ್ಲ ಎನ್ನುವ ಗೊಂದಲಗಳಿದ್ದವು. ಪ್ರೊ. ಬಾಲಚಂದ್ರ ರಾವ್ ಅವರು ಎರಡನ್ನೂ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಆಳವಾಗಿ ಕಲಿತರು. ಸುಭದ್ರ ಗಣಿತ ಬುನಾದಿಯ ಖಗೋಳ ಶಾಸ್ತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ‘ಫಲಜ್ಯೋತಿಷ ಬೇಕೇ?’ ಎಂಬ ಪುಸ್ತಕ ಬಹಳ ಓದುಗರನ್ನು ಸೆಳೆದಿದೆ. ಹಲವಾರು ಆವೃತ್ತಿಗಳನ್ನು ಕಂಡಿದೆ.
1993ರ ವೇಳೆಗೆ ಅವರು ಈ ವಿಷಯದಲ್ಲಿ ಹಿಡಿತವನ್ನು ಸಾಧಿಸಿ ಅದರಲ್ಲಿ ನಡೆಸಬೇಕಾದ ಅಧ್ಯಯನದ ಹಾದಿ ಬಹಳ ಕಷ್ಟಕರವಾದದ್ದು, ಅಲ್ಲದೆ ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ ಎಂಬುದನ್ನೂ ಅರಿತುಕೊಂಡರು. ಪಾಶ್ಚಾತ್ಯ ಶಿಕ್ಷಣ ಪದ್ಧತಿಯ ಕಾರಣ ಮೂಲೆಗುಂಪಾಗಿದ್ದ ಪಠ್ಯಗಳ ಅಧ್ಯಯನಕ್ಕೆ ಅವರು ತೊಡಗಿಕೊಂಡರು. ತಮ್ಮ ಹಳ್ಳಿಯಲ್ಲಿ ಅಡಗಿ ಕುಳಿತಿದ್ದ ಅಮೂಲ್ಯ ಹಸ್ತಪ್ರತಿಗಳನ್ನು ಹೊರತೆಗೆದು ಅವುಗಳ ಪ್ರಾಮುಖ್ಯವನ್ನು ಪ್ರಚುರಪಡಿಸಿದರು. ದಕ್ಷಿಣ ಭಾರತಾದ್ಯಂತ ಬಳಕೆಯಲ್ಲಿದ್ದ ಈ ಕೈಪಿಡಿಯು ‘ತ್ಯಾಗರ್ತಿ’ ಪಟ್ಟಿಗಳು ಎಂದೇ ಜನಪ್ರಿಯವಾಗಿತ್ತು.
ಭಾರತೀಯ ಖಗೋಳ ಶಾಸ್ತ್ರವನ್ನು ಫಲ ಜ್ಯೋತಿಷದ ಪಟ್ಟಿನಿಂದ ಹೊರತೆಗೆದು ಜನರನ್ನು ಆಕರ್ಷಿಸುವ ಅನೇಕ ಉಪನ್ಯಾಸಗಳನ್ನು ನೀಡಿದರು. ಬಸವನಗುಡಿಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಮೇಲೆ, ಹೊಸ ಹುರುಪಿನಿಂದ ಅಧ್ಯಯನ ಆರಂಭಿಸಿದರು. ಭಾರತೀಯ ವಿದ್ಯಾಭವನದ ‘ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧಿ ಕೇಂದ್ರ’ದ ನಿರ್ದೇಶಕರಾಗಿ ಸೇರಿ ಭಾರತೀಯ ಗಣಿತ ಮತ್ತು ಖಗೋಳ ಶಾಸ್ತ್ರವನ್ನು ಆಸಕ್ತಿಪೂರ್ಣವನ್ನಾಗಿ ಮಾಡಿ ಯುವಜನರನ್ನು ಆಕರ್ಷಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
ಹಲವಾರು ಆಸಕ್ತರಿಗೆ ಪಿಎಚ್.ಡಿ ಸಂಶೋಧನೆಗಾಗಿ ಮಾರ್ಗದರ್ಶನ ಮಾಡಿದರು. ಇವರ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕರಗಳಾಗಿವೆ. ತಮ್ಮ ಈ ಅಧ್ಯಯನದಲ್ಲಿ ಅವರು ಏಕಾಂಗಿಯೇ ಆಗಿದ್ದರು. ಸಾಕಷ್ಟು ಎಡರು ತೊಡರುಗಳನ್ನು ಎದುರಿಸಿದರು. ಆದರೂ ಅವರು ಅನೇಕ ಶಿಷ್ಯರನ್ನು ತಯಾರುಮಾಡುವ ಸವಾಲನ್ನು ಗೆದ್ದುಕೊಂಡರು. ಅವರು ಪ್ರಕಟಣೆಗಳು, ಗ್ರಂಥಗಳು ಈಗ ಆಕರ ಗ್ರಂಥಗಳಾಗಿವೆ. ಆರ್ಯಭಟೀಯ, ಕರಣಕುತೂಹಲ, ಗ್ರಹಲಾಘವ – ಈ ಗ್ರಂಥಗಳ ಇಂಗ್ಲಿಷ್ ಅನುವಾದ ಮತ್ತು ಸುದೀರ್ಘ ವಿವರಣೆಗಳು ವಿಶೇಷ ಆಕರ್ಷಣೆ ಎನ್ನಬಹುದು. ಗ್ರಹಣ, ಗ್ರಹಯುತಿ, ಆಚ್ಛಾದನೆ ಇಂತಹ ಖಗೋಳ ಘಟನೆಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. ವ್ಯತಿಪಾತ ಎಂಬ ಘಟನೆಯ ಬಗ್ಗೆ ಪಾಶ್ಚಾತ್ಯ ಗ್ರಂಥಗಳಲ್ಲಿ ಇಲ್ಲದ ವಿವರಣೆಗಳನ್ನು ಹುಡುಕಿ ತೆಗೆದಿದ್ದಾರೆ. ಇದು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗಿದೆ.
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಗಣಿತದಲ್ಲಿ ಆಸಕ್ತಿ ಮೂಡಿಸಬೇಕು ಎಂಬ ಉದ್ದೇಶದಿಂದ ಅವರು ಅನೇಕ ಗಣಿತ ಪುಸ್ತಕಗಳನ್ನು ವಿಶೇಷವಾಗಿ ಕನ್ನಡದಲ್ಲಿ ರಚಿಸಿದ್ದಾರೆ. ಜೊತೆಗೇ ಆರ್ಯಭಟ, ಭಾಸ್ಕರಾಚಾರ್ಯ ಮತ್ತು ಗಣೇಶ ದೈವಜ್ಞ – ಇವರುಗಳ ಗ್ರಂಥಗಳನ್ನು ಕನ್ನಡದಲ್ಲಿಯೂ ಒದಗಿಸಿದ್ದಾರೆ. ಅವರ ನಿಧನ ಭಾರತೀಯ ಗಣಿತ ಮತ್ತು ಖಗೋಳ ಅಧ್ಯಯನಕ್ಕೆ ತುಂಬಲಾರದ ನಷ್ಟ. ಏಕಾಂಗಿಯಾಗಿ ಈ ಕ್ಷೇತ್ರವನ್ನು ಪ್ರವೇಶಿಸಿ ಅನೇಕ ಯುವಜನರಿಗೆ ಸ್ಫೂರ್ತಿಯಾಗಿ ತಮ್ಮ ಛಾಪನ್ನು ಮೂಡಿಸಿರುವ ಪ್ರೊ. ಬಾಲಚಂದ್ರರಾವ್ ಅವರ ಕೊಡುಗೆ ಚಿರಕಾಲ ಉಳಿಯುವಂತಹುದು.
ಎಸ್. ಬಾಲಚಂದ್ರ ರಾವ್ ಇನ್ನಿಲ್ಲ
ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಬಾಲಚಂದ್ರರಾವ್ (80) ಅವರು ವಯೋಸಹಜ ಅನಾರೋಗ್ಯದಿಂದಾಗಿ ಬುಧವಾರ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು
ಇದ್ದಾರೆ. ಮಧ್ಯಾಹ್ನ ರಾಜಾಜಿನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.