ADVERTISEMENT

ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ

ಬಿ.ವಿ. ಶ್ರೀನಾಥ್
Published 22 ಆಗಸ್ಟ್ 2025, 23:33 IST
Last Updated 22 ಆಗಸ್ಟ್ 2025, 23:33 IST
‘ಇಂಡಿಯಾ’ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ
‘ಇಂಡಿಯಾ’ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ   

ಜಗದೀಪ್‌ ಧನಕರ್‌ ಅವರ ದಿಢೀರ್‌ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್‌ 9ರಂದು ಚುನಾವಣೆ ನಡೆಯಲಿದೆ. ಎನ್‌ಡಿಎಯು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ‘ಇಂಡಿಯಾ’ ಕೂಟವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇಬ್ಬರ ನಡುವಿನ ಸ್ಪರ್ಧೆ ಕುತೂಹಲ ಮೂಡಿಸಿದೆ. ದೇಶದ ಸಂವಿಧಾನ ತಜ್ಞರಲ್ಲಿ ಒಬ್ಬರಾಗಿರುವ ಸುದರ್ಶನ ರೆಡ್ಡಿ ಅವರ ಪರಿಚಯ ಇಲ್ಲಿದೆ...

***

ಅದು 2011; ಹಿರಿಯ ವಕೀಲರೂ ರಾಜ್ಯಸಭೆಯ ಸದಸ್ಯರೂ ಆಗಿದ್ದ ರಾಮ್ ಜೇಠ್ಮಲಾನಿ ಅವರು ಕಪ್ಪು ಹಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಆಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕಪ್ಪು ಹಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆಯೂ ನಿರ್ದೇಶಿಸಿತ್ತು. ಆ ಆದೇಶ ನೀಡಿದ ಸುಪ್ರೀಂ ಕೋರ್ಟ್‌ನ ಪೀಠದ ನೇತೃತ್ವ ವಹಿಸಿದ್ದವರು ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಮತ್ತು ನ್ಯಾಯಮೂರ್ತಿ ಎಸ್‌.ಎಸ್‌.ನಿಜ್ಜರ್. ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಮುಖಂಡರು ನ್ಯಾಯಾಲಯದ ನಿರ್ದೇಶನವನ್ನೂ, ‘ಸರ್ಕಾರಕ್ಕೆ ತಪರಾಕಿ ನೀಡಿದ’ ಬಿ.ಸುದರ್ಶನ ರೆಡ್ಡಿ ಅವರನ್ನೂ ಅಪಾರವಾಗಿ ಕೊಂಡಾಡಿದ್ದರು. ಅಂದು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಆದೇಶ ನೀಡಿದ್ದ ಸುದರ್ಶನ ರೆಡ್ಡಿ ಅವರು ಈಗ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಕೂಟದ ಅಭ್ಯರ್ಥಿ. ಅಂದು ಸುದರ್ಶನ ರೆಡ್ಡಿ ಅವರ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದ್ದ ಬಿಜೆಪಿ ಇಂದು ಅವರ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದೆ; ‘ಕಾಂಗ್ರೆಸ್‌ನ ಜೀ ಹುಜೂರ್ ಮನುಷ್ಯ’ ಎಂದು ಟೀಕಿಸುತ್ತಿದೆ. 

ADVERTISEMENT

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ರೈತ ಕುಟುಂಬದಿಂದ ಬಂದವರು ಸುದರ್ಶನ ರೆಡ್ಡಿ (ಜನನ: 1946 ಜುಲೈ 8). ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಅವರು, ಆಂಧ್ರ ಪ್ರದೇಶದ (ಅವಿಭಜಿತ) ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಒಂದಷ್ಟು ಕಾಲ ಸರ್ಕಾರದ ಪರ ವಕೀಲರಾಗಿ ಕೆಲಸ ಮಾಡಿದ ಅವರು, 1995ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾದರು. 2005ರಲ್ಲಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಅವರು, 2007ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದರು. 2011ರಲ್ಲಿ ನಿವೃತ್ತರಾದ ಅವರು, 2013ರಲ್ಲಿ ಗೋವಾದ ಮೊದಲ ಲೋಕಾಯುಕ್ತರಾಗಿ ಆಯ್ಕೆಯಾದರು. ಆದರೆ, ವೈಯಕ್ತಿಕ ಕಾರಣಗಳಿಂದ ಏಳೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.

ದೇಶದ ಸಂವಿಧಾನ ತಜ್ಞರಲ್ಲಿ ಒಬ್ಬರಾಗಿರುವ ಬಿ.ಸುದರ್ಶನ ರೆಡ್ಡಿ ಅವರು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟವಾದ ಗ್ರಹಿಕೆ ಉಳ್ಳವರು; 52 ವರ್ಷಗಳಿಂದ ಅವರು ಎಲ್ಲಿಗೆ ಹೋದರೂ ತಮ್ಮ ಕಿಸೆಯಲ್ಲಿ ಸಂವಿಧಾನದ ಪ್ರತಿಯನ್ನು ಇಟ್ಟುಕೊಂಡಿರುತ್ತಾರೆ. ಸಂವಿಧಾನದ ಮೌಲ್ಯಗಳಿಗೆ ಸಂಚಕಾರ ಬಂದಿರುವ ಪ್ರಸ್ತುತ ಸಂದರ್ಭದಲ್ಲಿ ಅವರ ಆಯ್ಕೆಯು ಬಹಳ ಮಹತ್ವದ್ದಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. 

‘ಇಂಡಿಯಾ’ ಕೂಟದ ಅಭ್ಯರ್ಥಿ ಎಂದು ಘೋಷಣೆಯಾದ ಗಳಿಗೆಯಿಂದ ಬಿಜೆಪಿಯು ಸುದರ್ಶನ ರೆಡ್ಡಿ ಅವರು ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿ ಅವರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಅವರು ಅಪಾಯಕಾರಿ ತೀರ್ಪುಗಳನ್ನು ನೀಡಿದವರು, ದೇಶದ್ರೋಹಿಗಳ ಪರ ಸಹಾನುಭೂತಿ ಉಳ್ಳವರು ಮತ್ತು ಲಜ್ಜೆಗೆಟ್ಟ ಅವಕಾಶವಾದಿ ಎಂದು ಟೀಕಿಸಿದೆ. ಸಲ್ವಾಂ ಜುಡುಂಗೆ ತಡೆಯೊಡ್ಡುವ ಮೂಲಕ ನಕ್ಸಲರ ವಿರುದ್ಧದ ಹೋರಾಟಕ್ಕೆ ಧಕ್ಕೆ ತಂದವರು, ಭೋಪಾಲ ಅನಿಲ ದುರಂತ ಪ್ರಕರಣದಲ್ಲಿ ಕಾಂಗ್ರೆಸ್ ಅನ್ನು ರಕ್ಷಿಸಿದವರು ಎಂದೂ ಆರೋಪಿಸಿದೆ. 

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ದಕ್ಷಿಣದವರೇ ಆಗಿರುವುದು ವಿಶೇಷವಾಗಿದೆ. ಬಿಜೆಪಿಯ ತಂತ್ರಗಾರಿಕೆಗೆ ಸಡ್ಡು ಹೊಡೆಯಲೆಂದೇ ‘ಇಂಡಿಯಾ’ ಕೂಟವು ಸುದರ್ಶನ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ ಎನ್ನಲಾಗುತ್ತಿದೆ. ಜತೆಗೆ, ಸುದರ್ಶನ ರೆಡ್ಡಿ ಅವರು ಅವಿಭಜಿತ ಆಂಧ್ರ ಪ್ರದೇಶಕ್ಕೆ ಸೇರಿದವರಾಗಿರುವುದು, ಎನ್‌ಡಿಎ ಸರ್ಕಾರದ ಭಾಗವಾಗಿರುವ ಟಿಡಿಪಿಯ ಚಂದ್ರಬಾಬು ನಾಯ್ಡು ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಟಿಡಿಪಿಯ ವಿರೋಧ ಪಕ್ಷವಾಗಿರುವ ವೈಎಸ್‌ಆರ್‌ಸಿಪಿಯ ಜಗನ್‌ಮೋಹನ್ ರೆಡ್ಡಿ ಅವರು ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರಿಗೇ ತಮ್ಮ ಬೆಂಬಲ ಎಂದು ಈಗಾಗಲೇ ಘೋಷಿಸಿದ್ದಾರೆ. ಈಗ ತೆಲುಗು ಮೂಲದವರೇ ‘ಇಂಡಿಯಾ’ ಅಭ್ಯರ್ಥಿಯಾಗಿರುವುದು ಅವರನ್ನೂ ವಿಚಲಿತರಾಗುವಂತೆ ಮಾಡಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಪ್ರತಿಷ್ಠೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರ–ಪ್ರತಿತಂತ್ರಗಳ ಮೇಲಾಟ ನಡೆಯುತ್ತಿದೆ. 

‘ಪ್ರಧಾನಿಯೇ ಮತ ಕೇಳುವಾಗ..’

ತಮ್ಮ ಸ್ಪರ್ಧೆಯನ್ನು ಸುದರ್ಶನ ರೆಡ್ಡಿ ಅವರೂ ಸಮರ್ಥಿಸಿಕೊಂಡಿದ್ದಾರೆ. ‘ಉಪರಾಷ್ಟ್ರಪತಿ ಹುದ್ದೆಯು ರಾಜಕೀಯ ಹುದ್ದೆ ಅಲ್ಲ. ಅದೊಂದು ಸಾಂವಿಧಾನಿಕ ಹುದ್ದೆ. ಹೀಗಾಗಿಯೇ ನಾನು ಅಭ್ಯರ್ಥಿಯಾಗಲು ಒಪ್ಪಿಕೊಂಡೆ. ನನಗೆ ಯಾವ ಪಕ್ಷದೊಂದಿಗೂ ಸಂಬಂಧ ಇಲ್ಲ. ರಾಜಕೀಯ ಪರಿಸ್ಥಿತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ತಮ್ಮ ಪಕ್ಷದ ಅಭ್ಯರ್ಥಿ ಪರ ದೇಶದ ಪ್ರಧಾನಿಯೇ ಮತ ಯಾಚನೆ ಮಾಡುತ್ತಿದ್ದಾರೆ. ಹೀಗಾಗಿ ನನಗೆ ಮತ ಹಾಕಿ ಎಂದು ನಾನು ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ’ ಎಂದು ಹೇಳಿದ್ದಾರೆ. ತಾನು ಗೆದ್ದರೆ ಸಂವಿಧಾನದ ರಕ್ಷಣೆ ಮಾಡುತ್ತೇನೆ ಎನ್ನುವುದು ಅವರ ಭರವಸೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.