ADVERTISEMENT

ಅಣ್ಣಾ ಹಜಾರೆಯವರ ಜವಾಬ್ದಾರಿ

ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST

ತಮ್ಮ ಪತ್ರಿಕೆಯ ಸಂಪಾದಕೀಯ ಲೇಖನ `ಆತ್ಮಾವಲೋಕನ ಮಾಡಿಕೊಳ್ಳಿ~ ಸಮಂಜಸವಾಗಿದೆ. ಅಣ್ಣಾ ಹಜಾರೆಯವರ `ಭ್ರಷ್ಟಾಚಾರ ವಿರುದ್ಧ ಭಾರತ~ ಹೂಡಿರುವ ಸತ್ಯಾಗ್ರಹವನ್ನು ತಾವು ತಿಳಿಸಿರುವಂತೆ ರಾಜಕಾರಣಿಗಳನ್ನು ಹೊರತುಪಡಿಸಿ ದೇಶದ ಸಮಸ್ತ ಜನಸಮುದಾಯ ಸ್ವಾಗತಿಸುತ್ತದೆ.

ಚಳವಳಿಗೆ ಇತ್ತೀಚೆಗೆ ಮೊದಲು ಸೇರುತ್ತಿದ್ದಷ್ಟು ಜನ ಸೇರುತ್ತಿಲ್ಲ. ಅದಕ್ಕೆ ಕಾರಣ ಚಳವಳಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನಿಮ್ಮ ಅಭಿಪ್ರಾಯ. ಅದಲ್ಲ ಕಾರಣ ಎಂದು ನಾನು ತಿಳಿಸ ಬಯಸುತ್ತೇನೆ.

ಸರ್ಕಾರದ ಭ್ರಷ್ಟಾಚಾರ ತಾರಕಕ್ಕೆ ಏರಿದೆ. ಅದಕ್ಕಾಗಿ ಕೂಡಲೇ ಲೋಕಪಾಲ್ ಮಸೂದೆಯನ್ನು ಸರ್ಕಾರ ಲೋಕಸಭೆಯ ಮುಂದಿಟ್ಟು ಅದಕ್ಕೆ ಅಂಗೀಕಾರ ಪಡೆಯಬೇಕೆಂದು ಅಣ್ಣಾ ಹಜಾರೆ ಒತ್ತಾಯ ತರಲು ಹೋರಾಟ ಹೂಡಿದರು. ಭಾರತದ ಎಲ್ಲ ಪ್ರಜೆಗಳ ಮನಸ್ಸಿನಲ್ಲಿಯೂ ಸರ್ಕಾರದ ಭ್ರಷ್ಟಾಚಾರದ ಬಗೆಗೆ ಕುದಿತ ಇತ್ತು.
 
ಅಣ್ಣಾ ಹಜಾರೆಯವರ ಈ ಚಳವಳಿ ಭಾರತೀಯರೆಲ್ಲರನ್ನೂ ಬಡಿದೆಬ್ಬಿಸಿತು. ಅಣ್ಣಾ ಹಜಾರೆ ದೆಹಲಿಯಲ್ಲಿ ಚಳವಳಿಗೆ ಚಾಲನೆ ಕೊಟ್ಟ ಕೂಡಲೇ ಭಾರತದ ಉದ್ದಗಲಕ್ಕೂ ಜನಾಂದೋಲನ ಭುಗಿಲೆದ್ದಿತು. ಹೋರಾಟದ ಪೂರ್ಣ ಕಲ್ಪನೆ ಇಲ್ಲದ ಈ ತಲೆಮಾರಿನ ಜನ ಇವರು ಚಳವಳಿ ಹೂಡಿದೊಡನೆಯೇ ಅದಕ್ಕೆ ಜಯ ದೊರಕುವುದೆಂದು ಭಾವಿಸಿದರು.

ಹದಿನೈದು ದಿನ ಹೋರಾಟ ನಡೆದರೂ, ವಾಂಛಿತ ಫಲ ದೊರಕದ್ದರಿಂದ ವ್ಯಗ್ರರಾದರು. ಲೋಕಪಾಲ್ ಮಸೂದೆ ಅಂಗೀಕಾರ ಪಡೆಯಲು ಅನೇಕ ವಿಧಿ ವಿಧಾನಗಳನ್ನು ಸರ್ಕಾರ ಅನುಸರಿಸಬೇಕಾಗುವುದೆಂಬುದರ ಅರಿವು ಹೋರಾಟಕ್ಕೆ ಇಳಿದವರಿಗೆ ಇರಲಿಲ್ಲ. ಈ ಲಂಬಿತ ಪ್ರಕ್ರಿಯೆ ಪೂರ್ಣಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ ಎಂಬುದರ ಕಲ್ಪನೆ, ಈ ಉತ್ಸಾಹಿ ಯೋಧರಿಗೆ ಇರಲಿಲ್ಲ.

ಹೀಗಾಗಿ, ಕ್ಷಿಪ್ರವಾಗಿ ತಮ್ಮ ಚಳವಳಿ ಮುಗಿಯುವುದೆಂದು ಲೆಕ್ಕಾಚಾರ ಹಾಕಿದ್ದ ಅವರಿಗೆ ನಿರಾಸೆಯಾಯಿತು.ಈ ವಿಳಂಬಕ್ಕೆ ಕಾರಣವೇನೆಂಬುದನ್ನು ಈಗ ಭ್ರಮನಿರಸನಗೊಂಡ ಈ ಯುವಕರಿಗೆ ವಿವರಿಸಬೇಕು. ಹಿಂದೆ ಈ ಚಳವಳಿಯಲ್ಲಿ ಭಾಗವಹಿಸಿದ್ದವರನ್ನು ಸಂಪರ್ಕ ಮಾಡುವ, ಅವರಿಗೆ ತಿಳುವಳಿಕೆ ನೀಡುವ ಕೆಲಸ ಈಗ ಆರಂಭವಾಗಬೇಕು. ಅವರನ್ನು ಮತ್ತೆ ಹೋರಾಟಕ್ಕೆ ಕರೆತರಬೇಕು.

ಕೇಜ್ರಿವಾಲ್‌ರವರು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸ್ವಯಂಸೇವಕರ ಸಭೆ ಕರೆದಿದ್ದರು. ನಾನು ಆ ಸಭೆಯಲ್ಲಿ `ಮೊದಲು ಅಣ್ಣಾ ಹಜಾರೆಯವರು ಬಾಬಾ ರಾಮದೇವ್ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಆದರೆ ಅವರ ಚಳವಳಿಗೆ ನಮ್ಮ ನೈತಿಕ ಬೆಂಬಲವಿದೆ ಎಂದು ಹೇಳಿದ್ದು, ಆನಂತರ ಅವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದು ಸ್ವಯಂಸೇವಕರ ಮನದಲ್ಲಿ ಗೊಂದಲ ಉಂಟು ಮಾಡುವುದೆಂದು~ ಹೇಳಿದ್ದೆ.

ಅಣ್ಣಾ ಹಜಾರೆಯವರು ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಸ್ಥಳಗಳಿಗಾದರೂ ಬಂದು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಬೇಕೆಂದು ಆಗ್ರಹಪೂರ್ವಕವಾಗಿ ಹೇಳಿದ್ದೆ. ಈ ಸೂಚನೆಗಳನ್ನು ಅವರು ಅಂಗೀಕರಿಸಿದರು. ತಾವು ಅಭಿಪ್ರಾಯಪಟ್ಟಿರುವಂತೆ ಅಣ್ಣಾ ಹಜಾರೆ ವಿಚಾರದಲ್ಲಿ ಜನತೆಗೆ ಪೂರ್ಣ ನಂಬಿಕೆ ಇದೆ. ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಅಣ್ಣಾ ಹಜಾರೆಯವರದಾಗಿದೆ. ಅಂತೆಯೇ ಪ್ರಜೆಗಳದೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.